ದುಬೈ ನಿವಾಸಿಗಳಿಗೆ 30 ದಿನಗಳ ಫಿಟ್ನೆಸ್ ಚ್ಯಾಲೆಂಜ್

Update: 2017-10-02 16:44 GMT

ದುಬೈ,ಅ.2: ದುಬೈ ಮಹಾನಗರದ ನಿವಾಸಿಗಳು 30 ದಿನಗಳ ಕಾಲ ದಿನಂಪ್ರತಿ 30 ನಿಮಿಷಗಳನ್ನು ವ್ಯಾಯಾಮಕ್ಕೆ ಮೀಸಲಿಡುವ ಮೂಲಕ ಮಹಾನಗರವನ್ನು ಜಗತ್ತಿನ ಅತ್ಯಂತ ದೈಹಿಕ ಆರೋಗ್ಯವಂತರಿರುವ ನಗರವಾಗಿ ರೂಪಿಸುವ ಸವಾಲಿನಲ್ಲಿ ಪಾಲ್ಗೊಳ್ಳಬೇಕೆಂದು ದುಬೈನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ, ಯುವರಾಜ ಶೇಖ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ರವಿವಾರ ಕರೆ ನೀಡಿದ್ದಾರೆ.

‘30 ನಿಮಿಷX30 ದಿನಗಳು’ ಸವಾಲನ್ನು ಶೇಖ್ ಹಮ್ದಾನ್ ಅವರು ಟ್ವಿಟರ್ ಮೂಲಕ ಘೋಷಿಸಿದ್ದರು. ಕ್ರೀಡೆಗಳನ್ನು ಅಭ್ಯಾಸ ಮಾಡುವ ಜಗತ್ತಿನ ಅತ್ಯಂತ ಕ್ರಿಯಾಶೀಲ ನಗರವಾಗಿ ರೂಪಿಸುವ ‘ಫಿಟ್ನೆಸ್ ಚ್ಯಾಲೆಂಜ್’ ಅನ್ನು ನಾವು ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.

ಈ ಅಭಿಯಾನವು, ಜೀವನದ ಗುಣಮಟ್ಟ ಸುಧಾರಣೆಯಲ್ಲಿ ಮುಂಚೂಣಿಯಲ್ಲಿರುವ ಜಾಗತಿಕ ನಗರಗಳ ಪಟ್ಟಿಯಲ್ಲಿ ದುಬೈಯನ್ನು ಸೇರ್ಪಡೆಗೊಳಿಸಲಿದೆ ಎಂದು ಶೇಖ್ ಹಮ್ದಾನ್ ಭರವಸೆ ವ್ಯಕ್ತಪಡಿಸಿದ್ದಾರೆ.

  ಆರೋಗ್ಯಕರ ಹಾಗೂ ಉತ್ಪಾದನಾಶೀಲ ಸಮಾಜದ ನಿರ್ಮಾಣಕ್ಕಾಗಿ ಜನತೆಯ ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮವನ್ನು ಹೆಚ್ಚಿಸುವುದೇ ಈ ಸವಾಲಿನ ಉದ್ದೇಶವಾಗಿದೆಯೆಂದು ಅವರು ಟ್ವೀಟ್ ಮಾಡಿದ್ದಾರೆ.ನವೆಂಬರ್ 18ರವರೆಗೆ ದಿನಂಪ್ರತಿ ಕನಿಷ್ಠ 30 ನಿಮಿಷ ಗಳ ಕಾಲ ವ್ಯಾಯಾಮದಲ್ಲಿ ಪಾಲ್ಗೊಳ್ಳಬೇಕೆಂದು ಅವರು ದುಬೈ ನಗರದ ಎಲ್ಲಾ ನಿವಾಸಿಗಳಿಗೆ ಕರೆ ನೀಡಿದ್ದಾರೆ. ಅಕ್ಟೋಬರ್ 20ರಿಂದ ಆರಂಭವಾಗಲಿರುವ ಈ ಅಭಿಯಾನದಲ್ಲಿ ಭಾಗವಹಿಸಲು ದುಬೈ ನಿವಾಸಿಗಳು ತಮ್ಮನ್ನು dubaifitnesschallenge.com ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News