ಗಲ್ಫ್ ಮೆಡಿಕಲ್ ವಿವಿಯಲ್ಲಿ ‘ವೈಟ್‌ಕೋಟ್’ ಸಮಾರಂಭ

Update: 2017-10-02 17:33 GMT

ಅಜ್ಮಾನ್, ಅ.2: ತುಂಬೆ ಸಮೂಹ ಸಂಸ್ಥೆಯ ಅಧೀನಸಂಸ್ಥೆ, ಯುಎಇಯಲ್ಲಿ ಇರುವ ಖ್ಯಾತ ಖಾಸಗಿ ವಿಶ್ವವಿದ್ಯಾನಿಲಯ ಗಲ್ಫ್ ಮೆಡಿಕಲ್ ಯುನಿವರ್ಸಿಟಿ(ಜಿಎಂಯು)ಯಲ್ಲಿ ‘ವೈಟ್‌ಕೋಟ್’ ಸಮಾರಂಭ ಇತ್ತೀಚೆಗೆ ನಡೆಯಿತು.

 ಜಿಎಂಯುಗೆ ನೋಂದಾಯಿತಗೊಂಡಿರುವ ವಿವಿಧ ಕಾಲೇಜುಗಳಲ್ಲಿ ವೈದ್ಯಕೀಯ, ಫಿಸಿಯೋಥೆರಪಿ, ದಂತವಿಜ್ಞಾನ, ಬಯೊಮೆಡಿಕಲ್ ಸಯನ್ಸ್, ಫಾರ್ಮಸಿ, ಲ್ಯಾಬೊರೆಟರಿ ಸಯನ್ಸ್, ನರ್ಸಿಂಗ್ ಮುಂತಾದ ಕೋರ್ಸ್‌ಗಳಿಗೆ ದಾಖಲಾಗಿರುವ ನೂತನ ವಿದ್ಯಾರ್ಥಿಗಳಿಗೆ ‘ವೈಟ್ ಕೋಟ್’ (ಬಿಳಿ ಮೇಲಂಗಿ) ಹಸ್ತಾಂತರಿಸುವ ಕಾರ್ಯಕ್ರಮ ಅಜ್ಮಾನ್‌ನಲ್ಲಿರುವ ಜಿಎಂಯುನ ಪ್ರಧಾನ ಸಭಾಂಗಣದಲ್ಲಿ ನಡೆಯಿತು.

ಈಗ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಒಟ್ಟು 80 ದೇಶಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಧ್ಯಯನ ನಡೆಸುತ್ತಿದ್ದಾರೆ.

ಮುಖ್ಯ ಅತಿಥಿಯಾಗಿದ್ದ ಜಿಎಂಯುನ ಸ್ಥಾಪಕ ಹಾಗೂ ಜಿಎಂಯು ಆಡಳಿತ ಮಂಡಳಿ(ಬೋರ್ಡ್ ಆಫ್ ಟ್ರಸ್ಟಿ)ಯ ಅಧ್ಯಕ್ಷ ತುಂಬೆ ಮೊಯ್ದಿನ್ ಮಾತನಾಡಿ, ಜಿಎಂಯುವಿನ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಿರಂತರ ಸಹಕಾರ ನೀಡುತ್ತಿರುವ ಅಜ್ಮಾನ್‌ನ ದೊರೆ, ಯುಎಇ ಸುಪ್ರೀಂಕೌನ್ಸಿಲ್ ಸದಸ್ಯ ಶೇಖ್ ಹುಮೈದ್ ಬಿನ್ ರಷೀದ್ ಅಲ್ ನುವಮಿಯವರಿಗೆ ಕೃತಜ್ಞತೆ ಅರ್ಪಿಸಿದರು. ಉನ್ನತ ಶಿಕ್ಷಣಾರ್ಥಿಗಳಿಗೆ ಜಿಎಂಯು ದಾರಿದೀಪವಾಗಿದೆ ಎಂದವರು ಹೇಳಿದರು.

 ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿ ಮಾತನಾಡಿದ ಪ್ರೊ.ಹೊಸ್ಸಂಹಮ್ದಿ, ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿಯಲ್ಲಿ ಹಾಗೂ ಆರೋಗ್ಯಸೇವೆ ವಿಭಾಗದಲ್ಲಿ ತಮ್ಮ ಶೈಕ್ಷಣಿಕ ಅಧ್ಯಯನವನ್ನು ಆರಂಭಿಸುವ ಸಾಂಕೇತಿಕ ಕಾರ್ಯಕ್ರಮವಾಗಿ ಈ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ‘ವೈಟ್‌ಕೋಟ್’ ಸ್ವೀಕರಿಸುವ ಹಾಗೂ ಅದನ್ನು ಧರಿಸುವ ಮೂಲಕ, ರೋಗಿಗಳ ಹಾಗೂ ಸಹಾಯದ ಅಗತ್ಯವಿರುವ ವ್ಯಕ್ತಿಗಳಿಗೆ ಸದಾ ಸೇವೆ ಸಲ್ಲಿಸುವ ಜವಾಬ್ದಾರಿಗೆ ವಿದ್ಯಾರ್ಥಿಗಳು ಬದ್ಧರಾದಂತಾಗಿದೆ . ವೃತ್ತಿಪರತೆ, ಶ್ರದ್ಧೆ ಮತ್ತು ಅನುಭೂತಿ ನೀವು ಆರಿಸಿಕೊಂಡ ವೃತ್ತಿಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.

  ಜಿಎಂಯು ಕುಲಾಧಿಪತಿ ಪ್ರೊ.ಹೊಸ್ಸಂಹಮ್ದಿ, ಆರೋಗ್ಯರಕ್ಷಣೆ ವಿಭಾಗದ ಉಪಾಧ್ಯಕ್ಷ ಹಾಗೂ ತುಂಬೆ ಗ್ರೂಪ್ ಬೋರ್ಡ್‌ನ ಸದಸ್ಯ ಅಕ್ಬರ್ ಮೊಯ್ದಿನ್ ತುಂಬೆ, ತುಂಬೆ ಟೆಕ್ನಾಲಜೀಸ್‌ನ ನಿರ್ದೇಶಕ ಹಾಗೂ ತುಂಬೆ ಗ್ರೂಪ್ ಬೋರ್ಡ್‌ನ ಸದಸ್ಯಅಕ್ರಮ್ ಮೊಯ್ದಿನ್ ತುಂಬೆ, ತುಂಬೆ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಜಿಎಂಯುನ ಡೀನ್‌ಗಳು, ಜಿಎಂಯುವಿನ ಅಂತಾರಾಷ್ಟ್ರೀಯ ಸಹಭಾಗಿ ಸಂಸ್ಥೆಗಳಾದ ಘಾನಾ ವಿವಿ ಮತ್ತು ಪೋಲಂಡ್‌ನ ಲುಬ್ಲಿನ್ ವಿವಿಯ ಪ್ರೊಫೆಸರ್‌ಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News