ಸೌದಿ ಅರೇಬಿಯದ ಪ್ರಾಚೀನ ಜ್ವಾಲಾಮುಖಿಗಳಲ್ಲಿ ನಿಗೂಢ ಕಲ್ಲಿನ ಆಕೃತಿಗಳು ಪತ್ತೆ!

Update: 2017-10-21 16:06 GMT

ಜಿದ್ದಾ (ಸೌದಿ ಅರೇಬಿಯ), ಅ. 21: ಸೌದಿ ಅರೇಬಿಯದ ಪ್ರಾಚೀನ ಜ್ವಾಲಾಮುಖಿಗಳ ಪಕ್ಕದಲ್ಲಿ ನೂರಾರು ನಿಗೂಢ ಆಕೃತಿಗಳನ್ನು ಪುರಾತನ ಶಾಸ್ತ್ರಜ್ಞರೊಬ್ಬರು ‘ಗೂಗಲ್ ಅರ್ತ್’ ಬಳಸಿ ಪತ್ತೆಹಚ್ಚಿದ್ದಾರೆ.

ದೇಶದ ಪಶ್ಚಿಮ ಹರಾತ್ ಖೇಬರ್‌ನಲ್ಲಿ ಸುಮಾರು 400ರಷ್ಟು ಕಲ್ಲಿನ ಗೋಡೆಗಳನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಪುರಾತತ್ವ ಶಾಸ್ತ್ರ ಪ್ರೊಫೆಸರ್ ಡೇವಿಡ್ ಕೆನಡಿ ಪತ್ತೆಹಚ್ಚಿದ್ದಾರೆ. ಈ ಕಲ್ಲಿನ ಗೋಡೆಗಳು 9,000 ವರ್ಷಗಳಿಗೂ ಅಧಿಕ ಹಳೆಯವು ಎಂದು ಭಾವಿಸಲಾಗಿದೆ.

ಈ ಗೋಡೆಗಳು, ಮಧ್ಯಪ್ರಾಚ್ಯದಾದ್ಯಂತ ಕಂಡುಬರುವ ‘ಗೇಟ್ಸ್’ ಎಂದು ಕರೆಯಲಾಗುವ ವಿನ್ಯಾಸಗಳನ್ನು ಹೋಲುತ್ತವೆ.

ಈ ಗೇಟ್‌ಗಳ ಉದ್ದೇಶ ತಿಳಿದಿಲ್ಲವಾದರೂ, ಮಧ್ಯಪ್ರಾಚ್ಯದ ಅಲೆಮಾರಿ ಜನಾಂಗವಾದ ಬೆಡೂಯಿನ್‌ಗಳು ಇವುಗಳನ್ನು ‘ಹಳೆಯ ಮನುಷ್ಯರ ಕೆಲಸಗಳು’ ಎಂಬುದಾಗಿ ಗುರುತಿಸುತ್ತಾರೆ.

ಆದರೆ, ಕೆನಡಿ ಪತ್ತೆಹಚ್ಚಿರುವ ಆಕೃತಿಗಳು ಹಿಂದಿನಂತಲ್ಲ. ಇವುಗಳ ಗಾತ್ರದಲ್ಲಿ ವ್ಯತ್ಯಾಸವಿದ್ದು, ದೊಡ್ಡ ಕಲ್ಲುಗಳು ಅರ್ಧ ಕಿಲೋಮೀಟರ್‌ಗೂ ಹೆಚ್ಚು ಉದ್ದವಿದೆ ಹಾಗೂ ಅತ್ಯಂತ ಕಿರಿಯ ಕಲ್ಲುಗಳು ಕೇವಲ 13 ಮೀಟರ್ ಗಾತ್ರ ಹೊಂದಿದೆ.

ಅವುಗಳ ನಡುವಿನ ಅಂತರವೂ ಕೆಲವು ಕಡೆ ಮೈಲುಗಳಷ್ಟಿದ್ದರೆ, ಇತರ ಕಡೆಗಳಲ್ಲಿ ಹೆಚ್ಚುಕಡಿಮೆ ತಾಗಿಕೊಂಡಿವೆ.

‘ಹಳೆಯ ಮನುಷ್ಯರು’ ನಿರ್ಮಿಸಿದ ಆಕೃತಿಗಳಲ್ಲಿ ‘ಹದ್ದು’ಗಳೂ ಇವೆ. ಈ ಕಲ್ಲಿನ ಆಕೃತಿಗಳನ್ನು ವಲಸೆ ಹಕ್ಕಿಗಳನ್ನು ಹಿಡಿಯಲು ಬಳಸಲಾಗುತ್ತಿತ್ತು ಎಂದು ಪುರಾತನ ಶಾಸ್ತ್ರಜ್ಞರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News