27 ವರ್ಷ ಬಳಿಕ ಇರಾಕ್‌ಗೆ ಹಾರಿದ ಸೌದಿ ಏರ್‌ಲೈನ್ಸ್ ವಿಮಾನ

Update: 2017-10-30 16:48 GMT

ರಿಯಾದ್, ಅ. 30: ಸೌದಿ ಅರೇಬಿಯದ ಸರಕಾರಿ ಒಡೆತನದ ಸೌದಿ ಅರೇಬಿಯನ್ ಏರ್‌ಲೈನ್ಸ್ ಸೋಮವಾರ 27 ವರ್ಷಗಳಲ್ಲೇ ಮೊದಲ ಬಾರಿಗೆ ಬಗ್ದಾದ್‌ಗೆ ಹಾರಾಟ ನಡೆಸಿದೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ. ನೆರೆಯ ಅರಬ್ ದೇಶಗಳೊಂದಿಗಿನ ಇರಾಕ್ ಸಂಬಂಧ ಉತ್ತಮಗೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಇದಕ್ಕೂ ಮೊದಲು, ಎರಡು ವಾರಗಳ ಹಿಂದೆ, ಸೌದಿಯ ಮಿತ ದರದ ಖಾಸಗಿ ವಿಮಾನಯಾನ ಸಂಸ್ಥೆ ‘ಫ್ಲೈನಾಸ್’ 1990ರ ಬಳಿಕ ಮೊದಲ ಬಾರಿಗೆ ರಿಯಾದ್‌ನಿಂದ ಬಗ್ದಾದ್‌ಗೆ ಹಾರಾಟ ನಡೆಸಿತ್ತು.

 1990ರ ಆಗಸ್ಟ್‌ನಲ್ಲಿ ಅಂದಿನ ಇರಾಕ್ ಅಧ್ಯಕ್ಷ ಸದ್ದಾಂ ಹುಸೈನ್ ತನ್ನ ಸೇನೆಯನ್ನು ನೆರೆಯ ಕುವೈತ್‌ಗೆ ನುಗ್ಗಿಸಿದ ಬಳಿಕ ಇರಾಕ್ ಮತ್ತು ಸೌದಿ ಅರೇಬಿಯಗಳ ನಡುವಿನ ವಿಮಾನ ಸಂಚಾರ ಕಡಿತಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News