ಲೆಬನಾನ್ ಪ್ರಧಾನಿ ಹರೀರಿ ರಾಜೀನಾಮೆ

Update: 2017-11-04 16:52 GMT

ಬೆರೂತ್, ನ. 4: ಸೌದಿ ಅರೇಬಿಯ ಪ್ರವಾಸದಲ್ಲಿರುವ ಲೆಬನಾನ್ ಪ್ರಧಾನಿ ಸಆದ್ ಹರೀರಿ ಶನಿವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ಈ ಅಚ್ಚರಿಯ ನಿರ್ಧಾರವು, ಈಗಾಗಲೇ ಪ್ರಾದೇಶಿಕ ಉದ್ವಿಗ್ನತೆಯಿಂದ ತತ್ತರಿಸುತ್ತಿರುವ ದೇಶವನ್ನು ಅನಿಶ್ಚಿತತೆಯತ್ತ ದೂಡಿದೆ.

ಸೌದಿ ಅರೇಬಿಯ ರಾಜಧಾನಿ ರಿಯಾದ್‌ನಿಂದ ಟೆಲಿವಿಶನ್‌ನಲ್ಲಿ ಭಾಷಣ ಮಾಡಿದ ಹರೀರಿ, ಅರಬ್ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಕ್ಕಾಗಿ ಇರಾನ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಗುಂಪಿನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘‘ಈ ವಲಯಕ್ಕೆ ಇರಾನ್ ಪೂರೈಸುತ್ತಿರುವ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ನಿಲ್ಲಿಸಲಾಗುವುದು’’ ಎಂದರು.

‘‘ವಲಯದಲ್ಲಿ ಇರಾನ್ ಹರಡುತ್ತಿರುವ ಕೆಡುಕುಗಳು ಅದಕ್ಕೇ ತಿರುಗುಬಾಣವಾಗುವುದು’’ ಎಂದು ಹೇಳಿದ ಹರೀರಿ, ಇರಾನ್ ಈ ವಲಯದಾದ್ಯಂತ ಅರಾಜಕತೆ, ಸಂಘರ್ಷ ಮತ್ತು ವಿನಾಶವನ್ನು ಹರಡುತ್ತಿದೆ ಎಂದು ಆರೋಪಿಸಿದರು.

ಹರೀರಿಯನ್ನು 2016ರ ಕೊನೆಯಲ್ಲಿ ಪ್ರಧಾನಿಯಾಗಿ ನೇಮಿಸಲಾಗಿತ್ತು ಹಾಗೂ ಅವರು 30 ಸದಸ್ಯರ ರಾಷ್ಟ್ರೀಯ ಏಕತೆ ಸಚಿವ ಸಂಪುಟವನ್ನು ಮುನ್ನಡೆಸಿದ್ದರು. ಆ ಸರಕಾರದಲ್ಲಿ ಶಿಯಾ ಉಗ್ರ ಗುಂಪು ಹಿಝ್ಬುಲ್ಲಾ ಕೂಡಾ ಭಾಗಿಯಾಗಿತ್ತು.

ಲೆಬನಾನ್‌ನಲ್ಲಿ ಈಗ ಎರಡು ಬಣಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಸುನ್ನಿ ಮುಸ್ಲಿಮ್ ಆಗಿರುವ ಹರೀರಿ ಬಣವು ಸೌದಿ ಅರೇಬಿಯಕ್ಕೆ ನಿಷ್ಠೆ ಹೊಂದಿದರೆ, ಹಿಜ್ಬುಲ್ಲಾ ನೇತೃತ್ವದ ಬಣವು ಇರಾನ್‌ಗೆ ನಿಷ್ಠೆ ಹೊಂದಿದೆ.

ರಫೀಕ್ ಹರೀರಿ ಹತ್ಯೆಗೆ ಸಂಬಂಧಿಸಿ ನೆದರ್‌ಲ್ಯಾಂಡ್ಸ್‌ನ ಹೇಗ್‌ನಲ್ಲಿ ವಿಶ್ವಸಂಸ್ಥೆ ಬೆಂಬಲಿತ ನ್ಯಾಯಮಂಡಳಿಯೊಂದರಲ್ಲಿ ಹಲವಾರು ಹಿಜ್ಬುಲ್ಲಾ ಸದಸ್ಯರ ವಿಚಾರಣೆಯು ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿದೆ.

ಹಿಜ್ಬುಲ್ಲಾ ನೀತಿಗಳು ಲೆಬನಾನನ್ನು ‘ಬಿರುಗಾಳಿಯ ಕೇಂದ್ರ ಬಿಂದು’ವಿನಂತಾಗಿಸಿವೆ ಎಂದರು.

ಅವರ ಹೇಳಿಕೆಗಳು ಲೆಬನಾನ್‌ನಲ್ಲಿ ಲೆಬನಾನ್‌ನಲ್ಲಿ ಉದ್ವಿಗ್ನತೆ ಸೃಷ್ಟಿಸಬಹುದು ಎಂದು ಹೇಳಲಾಗುತ್ತಿದೆ.

ನನ್ನ ಜೀವಕ್ಕೆ ಅಪಾಯವಿದೆ

 ತನ್ನ ಜೀವಕ್ಕೆ ಅಪಾಯವಿದೆ ಎಂದು ರಿಯಾದ್‌ನಿಂದ ಮಾಡಿದ ಟೆಲಿವಿಶನ್ ಭಾಷಣದಲ್ಲಿ ಸಆದ್ ಹರೀರಿ ಹೇಳಿದರು. 2005ರಲ್ಲಿ ತನ್ನ ತಂದೆ ದಿವಂಗತ ಪ್ರಧಾನಿ ರಫೀಕ್ ಹರೀರಿ ಹತ್ಯೆಗೀಡಾಗುವ ಮೊದಲು ಇದ್ದ ವಾತಾವರಣವೇ ದೇಶದಲ್ಲಿ ಈಗ ನೆಲೆಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News