ಯಮನ್‌ನ ಎಲ್ಲ ವಿಮಾನ ನಿಲ್ದಾಣ, ಬಂದರುಗಳು ತಾತ್ಕಾಲಿಕ ಬಂದ್

Update: 2017-11-06 15:57 GMT

ದುಬೈ, ನ. 6: ಇರಾನ್‌ನಿಂದ ಹೌದಿ ಬಂಡುಕೋರರಿಗೆ ಬರುವ ಶಸ್ತ್ರಾಸ್ತ್ರಗಳನ್ನು ತಡೆಯಲು ಯಮನ್‌ನ ಎಲ್ಲ ವಾಯು, ಭೂ ಮತ್ತು ಸಮುದ್ರ ಕೊಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಸೌದಿ ಅರೇಬಿಯ ನೇತೃತ್ವದ ಸೇನಾ ಮೈತ್ರಿಕೂಟ ಹೇಳಿದೆ.

ಶನಿವಾರ ರಿಯಾದ್‌ನತ್ತ ಹಾರಿ ಬಂದ ಕ್ಷಿಪಣಿಯೊಂದನ್ನು ತುಂಡರಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಇದು ಇರಾನ್ ಬೆಂಬಲಿತ ಹೌದಿ ಬಂಡುಕೋರರ ಅಪಾಯಕಾರಿ ಯುದ್ಧೋನ್ಮಾದವಾಗಿದೆ ಎಂದು ಮೈತ್ರಿಕೂಟ ಬಣ್ಣಿಸಿದೆ.

ಯಮನ್‌ನ ಹೆಚ್ಚಿನ ಭಾಗಗಳು ಈಗ ಹೌದಿ ಬಂಡುಕೋರರ ನಿಯಂತ್ರಣದಲ್ಲಿವೆ.

ಮೈತ್ರಿಕೂಟ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಷಿಪಣಿ ದಾಳಿಗೆ ಇರಾನನ್ನು ದೂಷಿಸಿದ್ದಾರೆ. ಆದರೆ, ಈ ಆರೋಪಗಳನ್ನು ಇರಾನ್‌ನ ರೆವಲೂಶನರಿ ಗಾರ್ಡ್ಸ್‌ನ ಮುಖ್ಯಸ್ಥ ತಿರಸ್ಕರಿಸಿದ್ದಾರೆ.

ಪ್ರಕ್ಷೇಪಕ ಕ್ಷಿಪಣಿಯನ್ನು ಸೌದಿ ಅರೇಬಿಯದ ವಾಯು ರಕ್ಷಣಾ ವ್ಯವಸ್ಥೆ ತಡೆಯಿತು ಹಾಗೂ ರಿಯಾದ್ ವಿಮಾನ ನಿಲ್ದಾಣದ ಸಮೀಪ ಅದನ್ನು ಕೆಳಗಿಳಿಸಿತು. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.

‘‘ಯಮನ್‌ನ ಎಲ್ಲ ವಿಮಾನ ನಿಲ್ದಾಣ, ಬಂದರು ಮತ್ತು ಭೂ ದ್ವಾರಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಮೈತ್ರಿಪಡೆಗಳ ಕಮಾಂಡ್ ನಿರ್ಧರಿಸಿದೆ’’ ಎಂದು ಸೌದಿ ಪ್ರೆಸ್ ಏಜನ್ಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅರಬ್ ದೇಶವಾಗಿರುವ ಯಮನ್‌ನಲ್ಲಿ 2015ರಲ್ಲಿ ಆರಂಭಗೊಂಡ ಆಂತರಿಕ ಸಂಘರ್ಷದಲ್ಲಿ ಈವರೆಗೆ 10,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಅಲ್ಲಿ ಮಾನವೀಯ ಬಿಕ್ಕಟ್ಟು ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News