ಸೌದಿ: ಇನ್ನಷ್ಟು ಪ್ರಭಾವಿಗಳ ಬಂಧನ

Update: 2017-11-09 16:35 GMT
ಮುಹಮ್ಮದ್ ಬಿನ್ ಸಲ್ಮಾನ್

ರಿಯಾದ್, ನ. 9: ಸೌದಿ ಅರೇಬಿಯದ ರಾಜಕೀಯ ಮತ್ತು ವ್ಯಾಪಾರಿ ಕುಳಗಳ ವಿರುದ್ಧದ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಯನ್ನು ಮುಂದುವರಿಸಿರುವ ಅಧಿಕಾರಿಗಳು, ಇನ್ನೂ ಹಲವರನ್ನು ಬಂಧಿಸಿದ್ದಾರೆ. ಹಾಗೂ ಇನ್ನಷ್ಟು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಮೂಲಗಳು ಬುಧವಾರ ಹೇಳಿವೆ.

  ಈಗಾಗಲೇ ರಾಜ ಕುಟುಂಬದ ಡಝನ್‌ಗಟ್ಟಲೆ ಸದಸ್ಯರು, ಅಧಿಕಾರಿಗಳು ಮತ್ತು ವ್ಯಾಪಾರಿ ಕುಳಗಳನ್ನು ಬಂಧಿಸಲಾಗಿದೆ. ಅವರು ಕಪ್ಪು ಹಣ ಬಿಳುಪು, ಲಂಚ ಪಾವತಿ, ಸುಲಿಗೆ ಹಾಗೂ ವೈಯಕ್ತಿಕ ಲಾಭಕ್ಕಾಗಿ ಸರಕಾರಿ ಕಚೇರಿಗಳನ್ನು ದುರುಪಯೋಗಪಡಿಸಿಕೊಂಡ ಆರೋಪಗಳನ್ನು ಎದುರಿಸುತ್ತಿದ್ದಾರೆ.

 ಈಗ, ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಯನ್ನು ವಿಸ್ತರಿಸಿರುವ ಅಧಿಕಾರಿಗಳು ತಪ್ಪಿತಸ್ಥರೆಂದು ಶಂಕಿಸಲಾದ ಇತರ ಹಲವರನ್ನು ಹೊಸದಾಗಿ ಬಂಧಿಸಿದ್ದಾರೆ ಎಂದು ಮೂಲಗಳು ಬುಧವಾರ ತಿಳಿಸಿವೆ.

ಈ ನಡುವೆ, ಇತರ ಶಂಕಿತರನ್ನು ತನಿಖಾಧಿಕಾರಿಗಳು ಫೋನ್ ಮೂಲಕ ಸಂಪರ್ಕಿಸಿ ಅವರ ಹಣಕಾಸು ವ್ಯವಹಾರಗಳ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ಸದ್ಯಕ್ಕೆ ಅವರು ಸ್ವತಂತ್ರವಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಆದಾಗ್ಯೂ, ಅಂತಿಮವಾಗಿ, ಈ ಕಾರ್ಯಾಚರಣೆಯಡಿ ಬಂಧನಕ್ಕೊಳಗಾಗುವವರ ಸಂಖ್ಯೆ ನೂರಾರು ಆಗಬಹುದು ಎಂದು ಹೇಳಲಾಗಿದೆ.

ಅದೇ ವೇಳೆ, ಸ್ಥಗಿತಗೊಂಡಿರುವ ದೇಶಿ ಬ್ಯಾಂಕ್ ಖಾತೆಗಳ ಸಂಖ್ಯೆ 1,700ನ್ನು ದಾಟಿದೆ ಹಾಗೂ ಈ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಬ್ಯಾಂಕಿಂಗ್ ಮೂಲಗಳು ಹೇಳಿವೆ.

ಇತ್ತೀಚೆಗೆ ಬಂಧನಕ್ಕೊಳಗಾದವರ ಪೈಕಿ ಹೆಚ್ಚಿನವರು ರಕ್ಷಣಾ ಸಚಿವರಾಗಿದ್ದ ಸುಲ್ತಾನ್ ಬಿನ್ ಅಬ್ದುಲ್ ಅಝೀಝ್ ರ ನಿಕಟ ಕುಟುಂಬ ಸದಸ್ಯರೊಂದಿಗೆ ನಂಟು ಹೊಂದಿದವರಾಗಿದ್ದಾರೆ. ಸುಲ್ತಾನ್ ಬಿನ್ ಅಬ್ದುಲಝೀಝ್ 2011ರಲ್ಲಿ ನಿಧನರಾಗಿದ್ದಾರೆ.

ಬಂಧನಕ್ಕೊಳಗಾದ ಇತರರು ಕೆಳ ಹಂತದ ಮ್ಯಾನೇಜರ್‌ಗಳು ಮತ್ತು ಅಧಿಕಾರಿಗಳಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಸೌದಿಯಲ್ಲಿ ವ್ಯಾಪಕ ಸ್ವಾಗತ

ಸೌದಿ ಅರೇಬಿಯದ ಪಟ್ಟದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ನೇತೃತ್ವದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಯನ್ನು ಹೆಚ್ಚಿನ ಸೌದಿ ಪ್ರಜೆಗಳು ಸ್ವಾಗತಿಸಿದ್ದಾರೆ. ಇದು ಶ್ರೀಮಂತರು ನಡೆಸುತ್ತಿದ್ದ ಸರಕಾರದ ನಿಧಿಗಳ ಕಳ್ಳತನದ ವಿರುದ್ಧದ ದಾಳಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

30 ನ್ಯಾಯಾಧೀಶರ ನೇಮಕ: 26 ನ್ಯಾಯಾಧೀಶರಿಗೆ ಭಡ್ತಿ

ಸೌದಿ ಅರೇಬಿಯದಲ್ಲಿ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆ ಮುಂದುವರಿಯುತ್ತಿರುವಂತೆಯೇ, ದೊರೆ ಸಲ್ಮಾನ್ 26 ನ್ಯಾಯಾಧೀಶರಿಗೆ ಭಡ್ತಿ ನೀಡಿದ್ದಾರೆ ಹಾಗೂ 30 ನ್ಯಾಯಾಧೀಶರನ್ನು ಹೊಸದಾಗಿ ನೇಮಿಸಿದ್ದಾರೆ ಎಂದು ದೇಶದ ಅಧಿಕೃತ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ಗುರುವಾರ ವರದಿ ಮಾಡಿದೆ.

ಭ್ರಷ್ಟಾಚಾರದಿಂದಾಗಿ ಹಲವಾರು ವರ್ಷಗಳಲ್ಲಿ ಸೌದಿ ಸರಕಾರದ ಬೊಕ್ಕಸದಿಂದ 800 ಬಿಲಿಯ ಡಾಲರ್ (ಸುಮಾರು 52 ಲಕ್ಷ ಕೋಟಿ ರೂಪಾಯಿ) ಹಣ ಹೊರಹರಿದಿದೆ ಹಾಗೂ ಆ ಪೈಕಿ ಹೆಚ್ಚಿನ ಹಣವನ್ನು ಸ್ವಿಝರ್‌ಲ್ಯಾಂಡ್ ಮತ್ತು ಬ್ರಿಟನ್ ಮುಂತಾದ ವಿದೇಶಗಳಲ್ಲಿ ಜಮೆ ಮಾಡಲಾಗಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News