ಸೌದಿ: ಅಕ್ರಮ ವಾಸ್ತವ್ಯ ನಿಗ್ರಹ ಕಾರ್ಯಾಚರಣೆ ಆರಂಭ

Update: 2017-11-15 17:23 GMT

ರಿಯಾದ್, ನ. 15: ವೀಸಾ ಅವಧಿ ಮೀರಿ ನೆಲೆಸಿರುವವರು ಹಾಗೂ ವಾಸ್ತವ್ಯ, ಉದ್ಯೋಗ ಮತ್ತು ಗಡಿ ಭದ್ರತೆ ನಿಯಮಗಳನ್ನು ಉಲ್ಲಂಘಿಸಿದವರನ್ನು ಪತ್ತೆಹಚ್ಚುವುದಕ್ಕಾಗಿ ಸೌದಿ ಅರೇಬಿಯದ ಆಂತರಿಕ ಸಚಿವಾಲಯವು ನವೆಂಬರ್ 15ರಿಂದ ಜಂಟಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ.

ವಿದೇಶಿ ಕೆಲಸಗಾರರನ್ನು ಗುರಿಯಾಗಿಸಿ ಈ ಕಾರ್ಯಾಚರಣೆಯನ್ನು ಅದು ಕೈಗೆತ್ತಿಕೊಂಡಿದೆ ಎನ್ನಲಾಗಿದೆ.

ವಾಸ್ತವ್ಯ, ಉದ್ಯೋಗ ಮತ್ತು ಗಡಿ ಸುರಕ್ಷತೆ ನಿಯಮಗಳನ್ನು ಉಲ್ಲಂಘಿಸಿರುವವರೊಂದಿಗೆ ವ್ಯವಹರಿಸುವುದು, ಅವರನ್ನು ಅಡಗಿಸಿಡುವುದು, ಆಶ್ರಯ ಕೊಡುವುದು, ಸಾಗಾಟ ಮಾಡುವುದು ಹಾಗೂ ಬೆಂಬಲ ನೀಡುವುದನ್ನು ನಿಷೇಧಿಸುವ ನಿಯಮಾವಳಿಗಳು ಮತ್ತು ಸೂಚನೆಗಳನ್ನು ಪಾಲಿಸುವಂತೆ ಸಚಿವಾಲಯವು ತನ್ನ ಪ್ರಜೆಗಳು ಮತ್ತು ನಿವಾಸಿಗಳಿಗೆ ಕರೆ ನೀಡಿದೆ.

ನಿಯಮಗಳನ್ನು ಉಲ್ಲಂಘಿಸುವ ನಾಗರಿಕರು ಮತ್ತು ನಿವಾಸಿಗಳ ಮೇಲೆ ಕಾನೂನಿನಲ್ಲಿ ವಿಧಿಸಲಾದ ಗರಿಷ್ಠ ದಂಡಗಳನ್ನು ವಿಧಿಸಲಾಗುವುದು ಎಂದು ಹೇಳಿದೆ.

ಈ ನಿಯಮಗಳ ಉಲ್ಲಂಘಕರ ಬಗ್ಗೆ ಮಾಹಿತಿ ನೀಡುವಂತೆ ಅದು ಜನರಿಗೆ ಕರೆ ನೀಡಿದೆ.

ಅಕ್ರಮವಾಗಿ ದೇಶದಲ್ಲಿ ವಾಸಿಸುತ್ತಿರುವ ವಿದೇಶೀಯರ ಶಿಕ್ಷೆರಹಿತ ಹಾಗೂ ದಂಡರಹಿತ ವಾಪಸಾತಿಗೆ ಸೌದಿ ಅರೇಬಿಯವು ಈಗಾಗಲೇ ಹಲವು ಅವಕಾಶಗಳನ್ನು ನೀಡಿದೆ.

ಈ ಯೋಜನೆಗಳ ಅವಧಿ ಮುಗಿದ ಬಳಿಕ ಅದು ಅಕ್ರಮ ನಿವಾಸಿಗಳ ವಿರುದ್ಧ ಕಾರ್ಯಾಚರಣೆಗೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News