ಇಸ್ಲಾಂಗೆ ಕಳಂಕ ತರಲು ಉಗ್ರರಿಗೆ ಅವಕಾಶ ನೀಡೆವು: ಸೌದಿ

Update: 2017-11-26 16:35 GMT

ರಿಯಾದ್,ನ.26: ಸೌದಿ ಅರೇಬಿಯವು ರವಿವಾರ ಭಯೋತ್ಪಾದನೆಯ ವಿರುದ್ಧ ಸಮರವನ್ನು ಘೋಷಿಸಿದ್ದು, ಇಸ್ಲಾಂನ ವರ್ಚಸ್ಸಿಗೆ ಕಳಂಕ ತರಲು ಭಯೋತ್ಪಾದಕರಿಗೆ ತಾನು ಅವಕಾಶ ನೀಡುವುದಿಲ್ಲವೆಂದು ಹೇಳಿದೆ.

  ರಿಯಾದ್‌ನಲ್ಲಿ ರವಿವಾರ ನಡೆದ ಭಯೋತ್ಪಾದನೆ ವಿರೋಧಿ ಇಸ್ಲಾಮಿಕ್ ಮಿಲಿಟರಿ ಒಕ್ಕೂಟ (ಐಎಂಸಿಟಿಸಿ)ದ 41 ಸದಸ್ಯ ರಾಷ್ಟ್ರಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ಈಜಿಪ್ಟ್‌ನ ಉತ್ತರ ಸಿನೈ ಪ್ರಾಂತದಲ್ಲಿ 300ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದರು.

 ವಿವಿಧ ರಾಷ್ಟ್ರಗಳ ರಕ್ಷಣಾ ವರಿಷ್ಠರು, ರಾಜತಾಂತ್ರಿಕರು ಹಾಗೂ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು ಇಸ್ಲಾಮ್‌ನ ವರ್ಚಸ್ಸಿಗೆ ಕಳಂಕ ತರಲು ಭಯೋತ್ಪಾದಕ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲವೆಂದು ಘೋಷಿಸಿದರು.

    ಇಸ್ಲಾಮಿಕ್ ಮಿಲಿಟರಿ ಭಯೋತ್ಪಾದನೆ ವಿರೋಧಿ ಒಕ್ಕೂಟದ ಮಿಲಿಟರಿ ಕಮಾಂಡರ್ ಹಾಗೂ ಪಾಕಿಸ್ತಾನದ ಮಾಜಿ ಸೇನಾ ವರಿಷ್ಠ ಜನರಲ್ ರಾಹಿಲ್ ಶರೀಫ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ಹೆಚ್ಚುಕಮ್ಮಿ 70 ಸಾವಿರ ಭಯೋತ್ಪಾದಕ ದಾಳಿಗಳು ನಡೆದಿದ್ದು, 2 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಭಯೋತ್ಪಾದನೆಯು ಇಸ್ಲಾಮಿಕ್ ಜಗತ್ತಿನ ಹಲವು ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದ್ದು ಇರಾಕ್,ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಅತ್ಯಧಿಕವಾಗಿ ಬಾಧಿತವಾಗಿವೆಯೆಂದು ಹೇಳಿದರು.

 ಐಎಂಸಿಟಿಸಿಯು ಯಾವುದೇ ದೇಶ, ಪಂಗಡ ಅಥವಾ ಧರ್ಮದ ವಿರುದ್ಧವಾಗಿಲ್ಲವೆಂದು ಸ್ಪಷ್ಟಪಡಿಸಿದ ಶರೀಫ್, ಇಸ್ಲಾಮ್ ಶಾಂತಿಯನ್ನು ಬೋಧಿಸುವ ಧರ್ಮವೆಂಬುದನ್ನು ಜಗತ್ತಿಗೆ ಅರಿವು ಮೂಡಿಸಲು ಸಕಲ ಪ್ರಯತ್ನಗಳನ್ನು ನಡೆಸಲಾಗುವುದೆಂದು ಹೇಳಿದರು.

ಮಕ್ಕಾದಿಂದ ಕಾರ್ಯಾಚರಿಸುತ್ತಿರುವ ವಿಶ್ವ ಮುಸ್ಲಿಂ ಲೀಗ್‌ನ ಮಹಾ ಕಾರ್ಯದರ್ಶಿ ಡಾ. ಮುಹಮ್ಮದ್ ಬಿನ್ ಅಬ್ದುಲ್ ಕರೀಂ ಅಲಿ ಇಸ್ಸಾ ಮಾತನಾಡಿ,‘‘ಭಯೋತ್ಪಾದನೆಯ ಚಿಂತನೆಯು ಇಸ್ಲಾಂನ ಸಂದೇಶಕ್ಕೆ ಅಪರಿಚಿತವಾದುದಾಗಿದೆ ಹಾಗೂ ಈ ಮೈತ್ರಿಕೂಟವು ಭಯೋತ್ಪಾದನೆಯನ್ನು ಕಿತ್ತೆಸೆಯಲಿದೆ’’ ಎಂದು ಘೋಷಿಸಿದರು.

 ಐಸಿಸ್‌ನಂತಹ ಭಯೋತ್ಪಾದಕ ಗುಂಪುಗಳು ಪ್ರತಿಪಾದಿಸುತ್ತಿರುವ ವಿಚಾರಧಾರೆಗಳ ಬಗ್ಗೆ ಪ್ರಸ್ತಾಪಿಸಿದ ಅವರು ಇಸ್ಲಾಮ್ ಹಾಗೂ ಇಸ್ಲಾಮಿಕ್ ಇತಿಹಾಸದ ಕುರಿತ ತಪ್ಪುವ್ಯಾಖ್ಯಾನದಿಂದಾಗಿ ಈ ಕೆಟ್ಟ ಚಿಂತನೆಗಳು ಉದ್ಭವಿಸಿದೆ ಎಂದರು.

ರಿಯಾದ್‌ನ ಫೈಸಲಿಯಾ ಹೊಟೇಲ್‌ನಲ್ಲಿ ಬಿಗಿ ಭದ್ರತೆಯ ನಡುವೆ ಈ ಸಮಾವೇಶವು ಆರಂಭಗೊಂಡಿದೆ.

ಸಮಾವೇಶದಲ್ಲಿ ಸದಸ್ಯ ರಾಷ್ಟ್ರಗಳು ಭಯೋತ್ಪಾದನೆಯನ್ನು ಹತ್ತಿಕ್ಕಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ರಹಸ್ಯವಾಗಿ ಮಾತುಕತೆ ನಡೆಸಲಿವೆ.ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವುದನ್ನು ತಡೆಗಟ್ಟುವ ಕುರಿತಾಗಿಯೂ ಅವು ಸಮಾಲೋಚನೆಗಳನ್ನು ನಡೆಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News