5,500 ಟನ್ ಹಿಟ್ಟು ಹೇರಿಕೊಂಡು ಬಂದ ಹಡಗು!

Update: 2017-11-27 15:48 GMT

ದುಬೈ, ನ. 27: 5,500 ಟನ್ ಹಿಟ್ಟು ಹೇರಿಕೊಂಡು ಬಂದಿರುವ ಹಡಗೊಂದು ಯಮನ್ ಹೊಡೈಡಾದ ಕೆಂಪು ಸಮುದ್ರದ ಬಂದರಿಗೆ ರವಿವಾರ ತಲುಪಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಯಮನ್‌ನಲ್ಲಿ ಹೌದಿ ಬಂಡುಕೋರರ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಸೌದಿ ಅರೇಬಿಯ ನೇತೃತ್ವದ ಮಿತ್ರ ಪಡೆ ವಿಧಿಸಿರುವ ಎರಡು ವಾರಗಳಿಗೂ ಅಧಿಕ ಅವಧಿಯ ದಿಗ್ಬಂಧನದ ಬಳಿಕ ಆಹಾರ ಪದಾರ್ಥವನ್ನು ಹೊತ್ತ ಈ ಹಡಗು ಯಮನ್‌ಗೆ ಬಂದಿದೆ.

ಇರಾನ್‌ನಿಂದ ಹೌದಿ ಬಂಡುಕೋರರಿಗೆ ಆಯುಧಗಳು ಬರುವುದನ್ನು ತಡೆಯುವ ಉದ್ದೇಶದಿಂದ ಮಿತ್ರ ಪಡೆಯು ನವೆಂಬರ್ 6ರಂದು ಯಮನ್‌ನ ಎಲ್ಲ ವಾಯು, ಭೂ ಮತ್ತು ಜಲ ಸಂಪರ್ಕ ಕೊಂಡಿಗಳನ್ನು ಮುಚ್ಚಿರುವುದನ್ನು ಸ್ಮರಿಸಬಹುದಾಗಿದೆ.

ಯಮನ್‌ನಿಂದ ರಿಯಾದ್‌ನತ್ತ ಉಡಾಯಿಸಲ್ಪಟ್ಟ ಕ್ಷಿಪಣಿಯೊಂದನ್ನು ಸೌದಿ ಅರೇಬಿಯ ತುಂಡರಿಸಿದ ಬಳಿಕ ಈ ಬೆಳವಣಿಗೆ ನಡೆದಿತ್ತು.

‘‘ಈ ಹಡಗು 106 ಮೀಟರ್ ಉದ್ದವಿದೆ ಹಾಗೂ 5,500 ಟನ್ ಹಿಟ್ಟನ್ನು ಹೊಂದಿದೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಯಮನ್‌ನಲ್ಲಿನ ಆಂತರಿಕ ಯುದ್ಧದಿಂದಾಗಿ ಸುಮಾರು 70 ಲಕ್ಷ ಮಂದಿ ಹಸಿವೆಯಿಂದ ಬಳಲುತ್ತಿದ್ದಾರೆ ಹಾಗೂ 10,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News