ತುಂಬೆ ಸಮೂಹದ ಆರ್ಥಿಕ ನಿರ್ದೇಶಕ ನಝೀರ್ ಹುಸೈನ್‌ಗೆ ಮೆನ ಸಿಎಫ್‌ಒ ಪ್ರಶಸ್ತಿ

Update: 2017-11-29 17:38 GMT

ದುಬೈ, ನ.29: ತುಂಬೆ ಸಮೂಹ ಸಂಸ್ಥೆಯ ಆರ್ಥಿಕ ಮತ್ತು ಬಜೆಟ್ ನಿರ್ದೇಶಕ ನಝೀರ್ ಹುಸೈನ್ ಅವರನ್ನು ಖಾಸಗಿ ಕ್ಷೇತ್ರಕ್ಕೆ ನೀಡಲಾಗುವ ಪ್ರತಿಷ್ಠಿತ ವರ್ಷದ ಮೆನ ಸಿಎಫ್‌ಒ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿಎಫ್‌ಒನ ಯೋಜನಾ ಒಕ್ಕೂಟ ಮೆನದ ಹನ್ನೊಂದನೇ ವರ್ಷಾಚರಣೆಯ ಎರಡನೇ ಮತ್ತು ಅಂತಿಮ ದಿನವಾದ ನವೆಂಬರ್ 16ರಂದು ದುಬೈಯ ಜೆಡಬ್ಲೂ ಮಾರ್ಯಾಟ್ ಮಾರ್ಕ್ವಿಸ್ ಹೊಟೇಲ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ನಝೀರ್ ಹುಸೈನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ನಝೀರ್ ಹುಸೈನ್ ಅವರು ತುಂಬೆಯ ಸಮೂಹದ ಯೋಜನೆಗಳನ್ನು ರೂಪಿಸುವ ತುಂಬೆ ಸಮೂಹ ಮಂಡಳಿಯ ಸದಸ್ಯರೂ ಆಗಿದ್ದಾರೆ.
ಸಂಸ್ಥೆಯ ತಾಂತ್ರಿಕ ದಿಕ್ಕಿನ ಜೊತೆಗೆ ಆರ್ಥಿಕ ವ್ಯವಹಾರವನ್ನು ಸಮರ್ಥವಾಗಿ ನಿಬಾಯಿಸಿ ಸಂಸ್ಥೆಯ ಧ್ಯೇಯೋದ್ದೇಶದ ಮೇಲೆ ನೇರ ಪರಿಣಾಮ ಬೀರಿದ ಮತ್ತು ಹಲವು ವರ್ಷಗಳಿಂದ ಸಂಸ್ಥೆಯ ಆರ್ಥಿಕ ತಂಡದ ನೇತೃತ್ವವನ್ನು ಅಭೂತಪೂರ್ವವಾಗಿ ನಿಬಾಯಿಸಿದ್ದಕ್ಕಾಗಿ ಸಿಎಫ್‌ಒ ತಾಂತ್ರಿಕ ಒಕ್ಕೂಟ ನಝೀರ್ ಹುಸೈನ್‌ರನ್ನು ಶ್ಲಾಘಿಸಿತು. 2015-16ರ ಸಾಲಿನಲ್ಲಿ ನಝೀರ್ ಹುಸೈನ್ ವರ್ಷದ ಕ್ರಾಂತಿಕಾರಿ ಸಿಎಫ್‌ಒ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಪ್ರಶಸ್ತಿ ಪಡೆದ ನಝೀರ್ ಹುಸೈನ್‌ರನ್ನು ಅಭಿನಂದಿಸಿದ ತುಂಬೆ ಗ್ರೂಪ್‌ನ ಸ್ಥಾಪಕಾಧ್ಯಕ್ಷ ತುಂಬೆ ಮೊಯ್ದಿನ್ ಅವರು, ನಾವು ಬೆಳವಣಿಗೆ ಮತ್ತು ಜಾಗತಿಕ ವಿಸ್ತರಣೆಯ ಪ್ರಮುಖ ಕಾಲಘಟ್ಟದಲ್ಲಿರುವಾಗ ತುಂಬೆ ಗ್ರೂಪ್‌ನ ದೂರದೃಷ್ಟಿತ್ವವುಳ್ಳ ಯೋಜನೆಗಳು ಜಾಗತಿಕ ವೇದಿಕೆಗಳಲ್ಲಿ ಗುರುತಿಸಲ್ಪಡುತ್ತಿರುವುದು ಗೌರವದ ವಿಷಯವಾಗಿದೆ. ಇಂತಹ ಸನ್ಮಾನಗಳು ನಮ್ಮ ಮುಂದಿನ ಪ್ರಯಾಣಕ್ಕೆ ಮತ್ತಷ್ಟು ಉತ್ತೇಜನವನ್ನು ನೀಡಲಿದೆ ಎಂದು ತಿಳಿಸಿದರು.

ಸಿಎಫ್‌ಒ ಯೋಜನಾ ಒಕ್ಕೂಟವು ಒಂದು ವಾರ್ಷಿಕ ಕಾರ್ಯಕ್ರಮವಾಗಿದ್ದು ಇದರಲ್ಲಿ 120 ಮುಖ್ಯ ಆರ್ಥಿಕ ಅಧಿಕಾರಿಗಳು, ಸಿಇಒಗಳು ಮತ್ತು ಕೈಗಾರಿಕಾ ತಜ್ಞರು ಸೇರುತ್ತಾರೆ ಮತ್ತು ಪ್ರಚಲಿತ ಕೈಗಾರಿಕೆಗಳು, ಒಂದು ಪ್ರದೇಶದ ನಿರಂತರ ಬೆಳವಣಿಗೆಯ ಬಗ್ಗೆ ಸಮಾಲೋಚನೆ ನಡೆಸುತ್ತಾರೆ ಮತ್ತು ಅನಿಯಮಿತ ನೆಟ್‌ವರ್ಕಿಂಗ್ ಅವಕಾಶಗಳನ್ನು ಒದಗಿಸುತ್ತಾರೆ. ಮುಖ್ಯ ಆರ್ಥಿಕ ಅಧಿಕಾರಿಗಳು ತಮ್ಮ ಸಂಸ್ಥೆಗೆ ಉತ್ತಮ ಫಲಿತಾಂಶದ ಮೂಲಕ ಯಶಸ್ಸನ್ನು ಕಂಡುಕೊಳ್ಳುವಲ್ಲಿ ನೀಡಿದ ಕಾಣಿಕೆಯ ಅಧಾರದ ಮೇಲೆ ಸಿಎಫ್‌ಒ ಸಾಧನಾ ಪ್ರಶಸ್ತಿಯನ್ನು ನೀಡಲಾಗುತ್ತದೆ.

ತುಂಬೆ ಗ್ರೂಪ್ ಬಗ್ಗೆ
1998ರಲ್ಲಿ ತುಂಬೆ ಮೊಯ್ದಿನ್ ಅವರಿಂದ ಸ್ಥಾಪನೆಯಾದ ತುಂಬೆ ಗ್ರೂಪ್ ಇಂದು ವೈವಿಧ್ಯಮಯ ಅಂತಾರಾಷ್ಟ್ರೀಯ ವ್ಯವಹಾರಗಳ ಸಮೂಹವಾಗಿ ಬೆಳೆದಿದ್ದು ಶಿಕ್ಷಣ, ಆರೋಗ್ಯಸೇವೆ, ವೈದ್ಯಕೀಯ ಸಂಶೋಧನೆ, ಆತಿಥ್ಯ, ರಿಯಲ್ ಎಸ್ಟೇಟ್, ತಂತ್ರಜ್ಞಾನ ಸೇರಿದಂತೆ 20 ಕ್ಷೇತ್ರಗಳಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಿದೆ. ತುಂಬೆ ಗ್ರೂಪ್ ಒಂದು ನಿರ್ದಿಷ್ಟ ಯೋಜನೆಯನ್ನು ಅನುಸರಿಸುತ್ತಿದ್ದು ಜಾಗತಿಕವಾಗಿ ಗುರುತಿಸಿಕೊಳ್ಳುವ ಮೂಲಕ ತನ್ನ ವ್ಯವಹಾರವನ್ನು ಹತ್ತು ಪಟ್ಟು ಹೆಚ್ಚಿಸಲು ಯೋಜಿಸಿದೆ. ಈ ಯೋಜನೆಯ ಮೂಲಕ 2022ರ ವೇಳೆಗೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 25,000ಕ್ಕೇರಿಸುವ ಗುರಿಯನ್ನು ತುಂಬೆ ಗ್ರೂಪ್ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News