ಬಿಡುಗಡೆಗಾಗಿ ಹಣಪಾವತಿ ಒಪ್ಪಂದ ಮಾಡಿಕೊಂಡ ಸೌದಿ ರಾಜಕುಮಾರರು

Update: 2017-12-06 16:55 GMT

ರಿಯಾದ್ (ಸೌದಿ ಅರೇಬಿಯ), ಡಿ. 6: ಸೌದಿ ಅರೇಬಿಯ ಇತ್ತೀಚೆಗೆ ನಡೆಸಿದ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಯಲ್ಲಿ ಬಂಧಿಸಲ್ಪಟ್ಟಿರುವ ಹೆಚ್ಚಿನವರು ತಮ್ಮ ಬಿಡುಗಡೆಗಾಗಿ ಸರಕಾರದೊಂದಿಗೆ ಹಣಪಾವತಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅಟಾರ್ನಿ ಜನರಲ್ ಶೇಖ್ ಸೌದ್ ಅಲ್-ಮುಜೀಬ್ ಹೇಳಿದ್ದಾರೆ.

ಒಂದು ತಿಂಗಳ ಹಿಂದೆ ನಡೆದ ದಾಳಿಯಲ್ಲಿ ರಾಜಕುಮಾರರು, ಸಚಿವರು ಮತ್ತು ವ್ಯಾಪಾರಿ ಕುಳಗಳು ಸೇರಿದಂತೆ ಡಝನ್‌ಗಟ್ಟಳೆ ಅತಿ ಗಣ್ಯ ವ್ಯಕ್ತಿಗಳನ್ನು ಅಧಿಕಾರಿಗಳು ಬಂಧಿಸಿದ್ದರು. ಅವರನ್ನು ಪಂಚತಾರಾ ಹೊಟೇಲೊಂದರಲ್ಲಿ ಇಡಲಾಗಿತ್ತು.

ಸುಮಾರು 320 ಮಂದಿಯನ್ನು ವಿಚಾರಣೆಗೆ ಕರೆಸಲಾಗಿತ್ತು ಹಾಗೂ ಆ ಪೈಕಿ 159 ಮಂದಿ ಈಗ ಬಂಧನದಲ್ಲಿದ್ದಾರೆ.

ಅವರಲ್ಲಿ ಹೆಚ್ಚಿನವರು ಹಣಕಾಸು ಇತ್ಯರ್ಥಕ್ಕೆ ಅಥವಾ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಸೌದಿ ಸರಕಾರಿ ಖಜಾನೆಗೆ ವರ್ಗಾಯಿಸಲು ಒಪ್ಪಿಕೊಂಡಿದ್ದಾರೆ ಎಂದು ಮುಜೀಬ್ ಹೇಳಿಕೆಯೊಂದರಲ್ಲಿ ತಿಳಿಸಿದರು.

ನ್ಯಾಶನಲ್ ಗಾರ್ಡ್‌ನ ಮಾಜಿ ಮುಖ್ಯಸ್ಥರೂ ಆಗಿರುವ ರಾಜಕುಮಾರ ಮಿತೇಬ್ ಬಿನ್ ಅಬ್ದುಲ್ಲಾರನ್ನು ಈಗಾಗಲೇ ಇದೇ ಹಣಪಾವತಿ ಒಪ್ಪಂದದಡಿಯಲ್ಲಿ ಬಿಡುಗಡೆ ಮಾಡಲಾಗಿರುವುದನ್ನು ಸ್ಮರಿಸಬಹುದಾಗಿದೆ. ಅವರು ಸರಕಾರಕ್ಕೆ 100 ಕೋಟಿ ಡಾಲರ್ (ಸುಮಾರು 6,452 ಕೋಟಿ ರೂಪಾಯಿ)ಗೂ ಅಧಿಕ ಮೊತ್ತ ಪಾವತಿಸಿದ್ದಾರೆ ಎನ್ನಲಾಗಿದೆ.

ಆದರೆ, ಭದ್ರತಾ ಪಡೆಗಳ ಮೇಲಿನ ನಿಯಂತ್ರಣವನ್ನು ಗಟ್ಟಿಗೊಳಿಸುವ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಪ್ರಯತ್ನಗಳ ಭಾಗವಾಗಿ ರಾಜಕುಮಾರ ಮಿತೇಬ್‌ರನ್ನು ಅವರ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂಬುದಾಗಿ ಕೆಲವು ವಿಶ್ಲೇಷಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News