ಸೌದಿಯಲ್ಲಿ ಸಂಕಷ್ಟದಲ್ಲಿದ್ದ ಭಾರತೀಯನಿಗೆ ನೆರವಾದ ಇಂಡಿಯನ್ ಸೋಶಿಯಲ್ ಫೋರಂ

Update: 2017-12-06 17:30 GMT

ಅಲ್ ಹಸ್ಸಾ,ಡಿ.6 : ಏಜೆಂಟ್ ನಿಂದ ಮೋಸಕ್ಕೊಳಗಾಗಿ ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿದ್ದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಭಾರತಕ್ಕೆ ಮರಳಲು ಅಲ್ ಹಸ್ಸಾ ಇಂಡಿಯನ್ ಸೋಶಿಯಲ್ ಫೋರಂ ನೆರವಾಗಿದೆ.

ಒಳ್ಳೆಯ ಕೆಲಸ ಕೊಡಿಸುವುದಾಗಿ ಹೇಳಿದ್ದ ಏಜೆಂಟ್ ಮಾತನ್ನು ನಂಬಿ ಉತ್ತರ ಪ್ರದೇಶದ ಸಗೀರ್ ಅಹ್ಮದ್ ಸೌದಿ ಅರೇಬಿಯಾಗೆ ಬಂದಿದ್ದರು. ಆದರೆ ಇಲ್ಲಿಗೆ ಬಂದ ನಂತರ ತಾನು ಮೋಸ ಹೋಗಿರುವುದು ಅವರ ಗಮನಕ್ಕೆ ಬಂದಿತ್ತು.   ಸೌದಿಯ ಅಲ್ ಹಸ್ಸಾ ಎಂಬಲ್ಲಿಗೆ ಸಗೀರ್ ಆಗಮಿಸಿದ್ದು, ಕಳೆದ 8 ತಿಂಗಳುಗಳಿಂದ ಅವರಿಗೆ ಕೆಲಸ ಸಿಕ್ಕಿರಲಿಲ್ಲ. ಸರಿಯಾದ ವಸತಿ ಸೌಲಭ್ಯವೂ ಇಲ್ಲದೆ, ಊರಿಗೂ ಹೋಗಲೂ ಸಾಧ್ಯವಾಗದೆ ಸಗೀರ್ ಕಂಗಾಲಾಗಿದ್ದರು.

ಈ ಬಗ್ಗೆ ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರಿಗೆ ಮಾಹಿತಿ ಲಭಿಸಿದ್ದು, ಅಲ್ ಹಸ್ಸಾ ಇಂಡಿಯನ್ ಸೋಶಿಯಲ್ ಫೋರಂ ಅಧ್ಯಕ್ಷ ಅಬ್ದುಲ್ ಖಾದರ್ ಮರವೂರ್, ಕಾರ್ಯದರ್ಶಿ ಮುಹಮ್ಮದ್ ರಫೀಕ್ ಬುಡೋಳಿ ಹಾಗೂ ಮುಹಮ್ಮದ್ ಕಲ್ಲಾಪು ತಕ್ಷಣ ಸಗೀರ್ ರನ್ನು ಭೇಟಿಯಾಗಿ ಊರಿಗೆ ಮರಳಿಸುವ ಭರವಸೆ ನೀಡಿದ್ದರು.

ತಮ್ಮ ಕೆಲಸದ ಮಧ್ಯೆಯೂ ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ಪತ್ರವನ್ನು ಪಡೆದು ಸಂತ್ರಸ್ತ ವ್ಯಕ್ತಿಯ ಪ್ರಾಯೋಜಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ವಿಷಯದ ಗಂಭೀರತೆಯ ಬಗ್ಗೆ ಪ್ರಾಯೋಜಕರಿಗೆ ಮನದಟ್ಟು ಮಾಡಿದರು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಾಯೋಜಕರು ಸಗೀರ್ ರನ್ನು ಊರಿಗೆ ಕಳುಹಿಸಲು ಸಹಕಾರ ನೀಡುವ ಭರವಸೆಯಿತ್ತರು. 

ಕೊನೆಗೂ ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರ ಪ್ರಯತ್ನ ಸಫಲವಾಗಿದ್ದು, ಸಗೀರ್ ಭಾರತ ತಲುಪಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News