ಡಾ ವಿನ್ಸಿಯ ಕಲಾಕೃತಿಯನ್ನು 2,900 ಕೋಟಿ ರೂ.ಗೆ ಖರೀದಿಸಿದ್ದು ಯಾರು ಗೊತ್ತೇ ?

Update: 2017-12-07 13:17 GMT

ಅಬುಧಾಬಿ, ಡಿ.7  : ಅಬುಧಾಬಿಯ ಪ್ರತಿಷ್ಠಿತ ಮ್ಯೂಸಿಯಂ ಲೂವರ್ ಜಗದ್ವಿಖ್ಯಾತ ವರ್ಣಚಿತ್ರಕಾರ ಲಿಯೊನಾರ್ಡೋ ಡಾ ವಿನ್ಸಿಯ ಬಹುಚರ್ಚಿತ ಕಲಾಕೃತಿ ‘ಸಾಲ್ವತೊರ್ ಮುಂಡಿ’ಯನ್ನು ಪ್ರದರ್ಶಿಸಲಿದೆ. ಕಳೆದ ವಾರ ಕ್ರಿಸ್ಟೀಸ್ ಹರಾಜಿನಲ್ಲಿ ಅತ್ಯಂತ ದೊಡ್ಡ ಮೊತ್ತ 450 ಮಿಲಿಯನ್ ಡಾಲರ್(2,900 ಕೋಟಿ ರೂ.)  ಗೆ ಹರಾಜಾದ ಈ ಕಲಾಕೃತಿಯನ್ನು ದಿ ನ್ಯೂಯಾರ್ಕ್ ಟೈಮ್ಸ್ ವರದಿಯೊಂದರಲ್ಲಿ ಸೌದಿ ರಾಜಕುಮಾರ ಬಾದೆರ್ ಬಿನ್ ಅಬ್ದುಲ್ಲ ಬಿನ್ ಮೊಹಮ್ಮದ್ ಬಿನ್ ಫರ್ಹಾನ್ ಅಲ್ ಸೌದ್ ಖರೀದಿಸಿದ್ದಾರೆಂದು ಕೆಲ ದಾಖಲೆಗಳ ಆಧಾರದಲ್ಲಿ ಹೇಳಲಾಗಿದೆ.

ಈ ಕಲಾಕೃತಿಯು ಅಬು ಧಾಬಿಯ ಮ್ಯೂಸಿಯಂನಲ್ಲಿ ಪ್ರದರ್ಶನಗೊಳ್ಳುವುದೆಂದು ಕ್ರಿಸ್ಟೀಸ್ ಕೂಡ ತಿಳಿಸಿದ್ದರೂ ಅದನ್ನು ಯಾರು ಖರೀದಿಸಿದ್ದಾರೆಂದು ಹೇಳಿಲ್ಲ. ಮಧ್ಯ ಪೂರ್ವ ಹಾಗೂ ಏಷ್ಯಾದ ಹಲವು ದೇಶಗಳ ಮ್ಯೂಸಿಯಂಗಳು ಜಗದ್ವಿಖ್ಯಾತ ಕಲಾಕೃತಿಗಳನ್ನು ಪಡೆದುಕೊಳ್ಳಲು ನಾ ಮುಂದು ತಾ ಮುಂದು ಎನ್ನುತ್ತಿರುವುದರಿಂದ ಇಂತಹ ಕಲಾಕೃತಿಗಳ ಬೆಲೆಯೂ ಹೆಚ್ಚುತ್ತಿದೆ.

ಲಿಯೊನಾರ್ಡೊ ಡಾ ವಿನ್ಸಿಯ ಕಲಾಕೃತಿಗಳಲ್ಲಿ ಖಾಸಗಿ ವ್ಯಕ್ತಿಗಳ ಕೈಯ್ಯಲ್ಲಿರುವ ಕೊನೆಯ ಕಲಾಕೃತಿ ಎಂದು ‘ಸಾಲ್ವತೊರ್ ಮುಂಡಿ’ ಗುರುತಿಸಲ್ಪಟ್ಟಿದ್ದು ಕ್ರಿಸ್ಟೀಸ್ ನಿರೀಕ್ಷಿಸಿದ್ದಕ್ಕಿಂತ ನಾಲ್ಕು ಪಟ್ಟು ಅಧಿಕ ಬೆಲೆಗೆ ಮಾರಾಟವಾಗಿದೆ.

ಲೂವರ್ ಅಬು ಧಾಬಿ ಪ್ಯಾರಿಸ್ ಮೂಲದ ಇದೇ ಹೆಸರಿನ ಸಂಸ್ಥೆಯ ಫ್ರಾಂಚೈಸಿ ಆಗಿದ್ದು ದೇಶದ ಪ್ರತಿಷ್ಠೆಯ ಸಂಕೇತವಾಗಿದೆ. ಈ ಮ್ಯೂಸಿಯಂನ ಹಿಂದಿರುವ ಸಂಸ್ಥೆಯ ಕಳೆದೊಂದು ದಶಕದಲ್ಲಿ ಜಾಗತಿಕ ಕಲಾಕೃತಿಗಳ ಮಾರುಕಟ್ಟೆಯಲ್ಲಿ ಬಹಳಷ್ಟು ಖರೀದಿಗಳನ್ನು ನಡೆಸಿದ್ದು, ಕಳೆದ ತಿಂಗಳು ತನ್ನ 600ಕ್ಕೂ ಹೆಚ್ಚು ಖಾಯಂ ಕಲಾಕೃತಿಗಳೊಂದಿಗೆ ಸಾರ್ವಜನಿಕರಿಗಾಗಿ ತೆರೆದುಕೊಂಡಿದೆ. ಜಿಯೊವನ್ನಿ ಬೆಲ್ಲಿನಿಯ ‘‘ಮೆಡೊನ್ನ ಆ್ಯಂಡ್ ಚೈಲ್ಡ್,’ ಡಾ ವಿನ್ಸಿಯ ‘ಲಾ ಬೆಲ್ಲೆ ಫೆರ್ರೊನೀರ್’ ಕೂಡ ಇಲ್ಲಿ ಪ್ರದರ್ಶಿಸಲಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News