ರಿಯಾದ್‌ನತ್ತ ಇನ್ನೊಂದು ಕ್ಷಿಪಣಿ ಹಾರಿಸಿದ ಹೌದಿ ಬಂಡುಕೋರರು: ಅರ್ಧದಲ್ಲೇ ತುಂಡರಿಸಿದ ಸೌದಿ

Update: 2017-12-20 16:50 GMT

ಜಿದ್ದಾ (ಸೌದಿ ಅರೇಬಿಯ), ಡಿ. 20: ಯಮನ್‌ನಲ್ಲಿರುವ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಮಂಗಳವಾರ ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನತ್ತ ಇನ್ನೊಂದು ಕ್ಷಿಪಣಿಯನ್ನು ಉಡಾಯಿಸಿದ್ದಾರೆ. ಈ ಬಾರಿ ಬಂಡುಕೋರರ ಗುರಿ ಸೌದಿ ರಾಜಧಾನಿಯಲ್ಲಿರುವ ರಾಜ ಅರಮನೆಯಾಗಿತ್ತು.

ಈ ವಿಷಯವನ್ನು ಕಾನೂನುಬದ್ಧ ಯಮನ್ ಸರಕಾರದ ಬೆಂಬಲಕ್ಕೆ ನಿಂತಿರುವ ಸೌದಿ ಅರೇಬಿಯ ನೇತೃತ್ವದ ಅರಬ್ ಮೈತ್ರಿಕೂಟ ತಿಳಿಸಿದೆ.

‘‘ಈ ಕ್ಷಿಪಣಿಯನ್ನು ದಕ್ಷಿಣ ರಿಯಾದ್‌ನಲ್ಲಿರುವ ಸೌದಿ ಪೇಟ್ರಿಯಟ್ ರಕ್ಷಣಾ ವ್ಯವಸ್ಥೆಯು ತುಂಡರಿಸಿದೆ’’ ಎಂದು ಮೈತ್ರಿಕೂಟದ ವಕ್ತಾರ ಕರ್ನಲ್ ತುರ್ಕಿ ಅಲ್-ಮಾಲಿಕಿ ತಿಳಿಸಿದರು.

ಕ್ಷಿಪಣಿ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಹಾಗೂ ಯಾವುದೇ ಸೊತ್ತಿಗೆ ಹಾನಿಯಾಗಿಲ್ಲ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ನವೆಂಬರ್ 4ರಂದು ಹೌದಿ ಬಂಡುಕೋರರು ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಕ್ಷಿಪಣಿ ಹಾರಿಸಿದ್ದರು. ಅದನ್ನು ರಾಯಲ್ ಸೌದಿ ವಾಯು ರಕ್ಷಣಾ ಪಡೆಯು ಅರ್ಧದಲ್ಲೇ ತುಂಡರಿಸಿತ್ತು ಹಾಗೂ ಯಾವುದೇ ಸಾವು-ನೋವು ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿರಲಿಲ್ಲ.

ಈ ವರ್ಷ ಯಮನ್‌ನಿಂದ ಸೌದಿ ಅರೇಬಿಯದತ್ತ ಉಡಾಯಿಸಲಾದ ನಾಲ್ಕೂ ಕ್ಷಿಪಣಿಗಳು ಇರಾನ್‌ನಲ್ಲಿ ನಿರ್ಮಾಣಗೊಂಡವು ಎಂಬುದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನೇಮಿತ ಪರಿಣತ ತಂಡವೊಂದು ಖಚಿತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News