ಮದೀನಾ: ಕುರ್‌ಆನ್ ನ ವಿಶಿಷ್ಟ ಪ್ರದರ್ಶನ

Update: 2017-12-22 16:44 GMT

ಮದೀನಾ (ಸೌದಿ ಅರೇಬಿಯ), ಡಿ. 22: ಮುಸ್ಲಿಮರ ಪವಿತ್ರ ನಗರ ಸೌದಿ ಅರೇಬಿಯದ ಮದೀನಾದಲ್ಲಿ ಪವಿತ್ರ ಗ್ರಂಥ ಕುರ್‌ಆನ್ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಕಿಂಗ್ ಫಾಹದ್ ಕಾಂಪ್ಲೆಕ್ಸ್ ಫಾರ್ ದ ಪ್ರಿಂಟಿಂಗ್ ಆಫ್ ದ ಹೋಲಿ ಕುರ್‌ಆನ್, ಜನರಲ್ ಪ್ರೆಸಿಡೆನ್ಸಿ ಫಾರ್ ದ ಅಫೇರ್ಸ್ ಆಫ್ ದ ಗ್ರಾಂಡ್ ಮಾಸ್ಕ್ ಆ್ಯಂಡ್ ದ ಪ್ರಾಫೆಟ್ಸ್ ಮಾಸ್ಕ್, ಕಿಂಗ್ ಅಬ್ದುಲ್ ಅಝೀಝ್ ಫೌಂಡೇಶನ್ ಫಾರ್ ರಿಸರ್ಚ್ ಆ್ಯಂಡ್ ಆರ್ಕೈವ್ಸ್, ಮದೀನಾದಲ್ಲಿರುವ ಕಿಂಗ್ ಅಬ್ದುಲ್ ಅಝೀಝ್ ಜನರಲ್ ಲೈಬ್ರರಿ, ಕಿಂಗ್ ಸೌದಿ ವಿಶ್ವವಿದ್ಯಾನಿಲಯ ಮತ್ತು ಕಿಂಗ್ ಅಬ್ದುಲ್ ಅಝೀಝ್ ವಿಶ್ವವಿದ್ಯಾನಿಲಯ ಈ ಪ್ರದರ್ಶನದಲ್ಲಿ ಪಾಲ್ಗೊಂಡಿವೆ.

ಕುರ್‌ಆನ್‌ನ್ನು ಕಲಿಯುವುದು ಮತ್ತು ಕಲಿಸುವುದು, ಕುರ್‌ಆನ್‌ನ ಶ್ರೇಷ್ಠತೆಯನ್ನು ಸಾರುವುದು, ಕುರ್‌ಆನ್‌ನ ಇತಿಹಾಸವನ್ನು ತಿಳಿದುಕೊಳ್ಳುವುದು, ಕುರ್‌ಆನ್‌ನ ವಿಶೇಷ ತಂತ್ರಜ್ಞಾನಗಳನ್ನು ಪ್ರದರ್ಶಿಸುವುದು ಹಾಗೂ ಕುರ್‌ಆನ್‌ನ ಪೋಷಣೆಯಲ್ಲಿ ಸೌದಿ ಅರೇಬಿಯದ ಶ್ರಮವನ್ನು ತಿಳಿಯಪಡಿಸುವುದು ಈ ಪ್ರದರ್ಶನದ ಉದ್ದೇಶವಾಗಿದೆ.

ಕುರ್‌ಆನ್ ಪ್ರದರ್ಶನದಲ್ಲಿ ಹಲವಾರು ಹಸ್ತಪ್ರತಿಗಳು ಮತ್ತು ಸಮಾಜದ ಅಗತ್ಯಕ್ಕೆ ಹೊಂದಿಕೊಳ್ಳುವ ಆಧುನಿಕ ತಂತ್ರಜ್ಞಾನಗಳಿವೆ ಎಂದು ಪ್ರದರ್ಶನದ ಉಸ್ತುವಾರಿ ಹಂಝ ಅಬ್ದುಲ್ ಕರೀಂ ‘ಅರಬ್ ನ್ಯೂಸ್’ಗೆ ತಿಳಿಸಿದರು.

 ಹಾಫಿಝ್ ಉಸ್ಮಾನ್ ಬರೆದ ಹಸ್ತಪ್ರತಿಗಳು ಇಲ್ಲಿವೆ. ಹಾಫಿಝ್ ಉಸ್ಮಾನ್ ಕುರ್‌ಆನ್‌ನ 106 ಹಸ್ತಪ್ರತಿಗಳನ್ನು ಬರೆದಿದ್ದಾರೆ ಹಾಗೂ 107ನೆ ಪ್ರತಿಯನ್ನು ಬರೆಯುತ್ತಿದ್ದಾಗ ನಿಧನರಾಗಿದ್ದಾರೆ.

200 ವರ್ಷ ಹಳೆಯ ಅತಿ ಭಾರದ ಕುರ್‌ಆನ್

ಕುರ್‌ಆನ್ ಪ್ರದರ್ಶನದಲ್ಲಿರುವ 200 ವರ್ಷಗಳ ಹಳೆಯ ವಿಶಿಷ್ಟ ಹಸ್ತಪ್ರತಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಅದನ್ನು ಗುಲಾಂ ಮುಹಿಯುದ್ದೀನ್ ಬರೆದಿದ್ದಾರೆ.

ಅತಿ ಭಾರದ ಈ ಹಸ್ತಪ್ರತಿಯನ್ನು  4 ಒಂಟೆಗಳ ಮೇಲೆ ಅಫ್ಘಾನಿಸ್ತಾನದಿಂದ ಮದೀನಾಕ್ಕೆ ಕರೆತರಲಾಗಿತ್ತು ಎಂದು ದಾಖಲಾಗಿದೆ.

ಈ ಹಸ್ತಪ್ರತಿಯು ಒಂದೂವರೆ ಮೀಟರ್ ಉದ್ದವಿದೆ ಹಾಗೂ ಒಂದು ಒಂದು ಮೀಟರ್ ಅಗಲವಿದೆ. ಅದು 154 ಕೆಜಿ ಭಾರವಿದೆ. ಪ್ರತಿ ಪುಟದ ಕೆಳಗೆ ಪರ್ಶಿಯನ್ ಭಾಷೆಯಲ್ಲಿ ಅನುವಾದವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News