ಆಭರಣ ಕ್ಷೇತ್ರದಲ್ಲಿ ಸ್ಥಳೀಯರಿಗೆ ಅವಕಾಶ: ಸೌದಿಯಲ್ಲಿ ವಿದೇಶಿ ಕಾರ್ಮಿಕರ ಉದ್ಯೋಗಕ್ಕೆ ಕತ್ತರಿ

Update: 2017-12-27 16:37 GMT

ರಿಯಾದ್, ಡಿ.27: ಸ್ಥಳೀಯ ಜನರಿಗೆ ಅವಕಾಶ ನೀಡುವ ಸಲುವಾಗಿ ಆಭರಣ ಕ್ಷೇತ್ರದಲ್ಲಿ ವಿದೇಶಿ ಕೆಲಸಗಾರರಿಗೆ ಕತ್ತರಿ ಹಾಕಲು ಸೌದಿ ಅರೇಬಿಯಾ ನಿರ್ಧರಿಸಿದೆ. ಚಿನ್ನ ಮತ್ತು ಆಭರಣ ಕ್ಷೇತ್ರದಲ್ಲಿ ಸ್ಥಳೀಯತೆಗೆ ಪ್ರಾಮುಖ್ಯತೆ ನೀಡುವ ಉದ್ದೇಶದೊಂದಿಗೆ ಸೌದಿ ಅರೇಬಿಯಾದ ಏಳು ಆಡಳಿತ ಪ್ರದೇಶಗಳು ಈ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಘೋಷಿಸಿವೆ.

ಈ ಬೆಳವಣಿಗೆಯು ಎರಡು ವಾರಗಳ ಹಿಂದೆ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಸ್ಥಳೀಯತೆಯನ್ನು ಪ್ರೋತ್ಸಾಹಿಸಲು ತೆಗೆದುಕೊಂಡ ನಿರ್ಧಾರದ ಭಾಗವಾಗಿದೆ ಎಂದು ಸಚಿವಾಲಯದ ವಕ್ತಾರರಾದ ಖಾಲಿದ್ ಅಬಾ ಅಲ್-ಖೈಲ್ ಅರಬ್ ನ್ಯೂಸ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಖಾಸಿಮ್,ತಬೂಕ್, ನಜ್ರಾನ್, ಬಹಾ, ಅಸಿರ್, ಉತ್ತರದ ಗಡಿ ಮತ್ತು ಜಝಾನ್ ಮುಂತಾದ ಏಳು ಆಡಳಿತ ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ ಆಭರಣ ಕ್ಷೇತ್ರದಲ್ಲಿ ವಿದೇಶಿಯರ ಅವಲಂಬನೆಯನ್ನು ಕಡಿಮೆಗೊಳಿಸಿದ ಸ್ಥಳೀಯರಿಗೆ ಅವಕಾಶ ನೀಡಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ. ಹದಿಮೂರು ಆಡಳಿತ ಪ್ರದೇಶಗಳ ಪೈಕಿ ಆಯ್ದ ಏಳು ಪ್ರದೇಶಗಳು ಈಗಾಗಲೇ ಸೌದಿ ಪ್ರಜೆಗಳನ್ನು ಆಯ್ಕೆ ಮಾಡುವ ಮತ್ತು ಅವರಿಗೆ ತರಬೇತಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ಸೌದಿ ಅರೇಬಿಯಾದಲ್ಲಿರುವ ಆರು ಸಾವಿರ ಚಿನ್ನ ಮತ್ತು ಆಭರಣ ಮಳಿಗೆಗಳಲ್ಲಿ ಸುಮಾರು 35,000 ವಿದೇಶಿಯರು ಕೆಲಸ ಮಾಡುತ್ತಿದ್ದಾರೆ.

ಚಿನ್ನ ಮತ್ತು ಆಭರಣ ಮಳಿಗೆಗಳಲ್ಲಿ ಸ್ಥಳೀಯತೆ ತರುವ ನಿರ್ಧಾರವು ಪ್ರದೇಶ ಆಧಾರಿತ ಸ್ಥಳೀಯಕರಣದ ಕಾರ್ಯಕ್ರಮದ ಅಡಿಯಲ್ಲಿ ಬರುತ್ತದೆ ಮತ್ತು ಅದಕ್ಕೆ ಮುನಿಸಿಪಲ್ ಮತ್ತು ಗ್ರಾಮೀಣ ವ್ಯವಹಾರ ಸಚಿವಾಲಯ, ಕಾಮರ್ಸ್ ಮತ್ತು ಹೂಡಿಕೆ ಸಚಿವಾಲಯ, ಸಾರ್ವಜನಿಕ ಕ್ಷೇತ್ರ ಮತ್ತು ಪಾಸ್‌ಪೋರ್ಟ್ ಇಲಾಖೆಯ ಸಹಯೋಗದೊಂದಿಗೆ ಆಂತರಿಕ ಸಚಿವಾಲಯ, ಕಾರ್ಮಿಕ ಸಚಿವಾಲಯ ಮತ್ತು ರಾಜ್ಯಪಾಲರು ಚಾಲನೆ ನೀಡಿದ್ದಾರೆ ಎಂದು ಖೈಲ್ ತಿಳಿಸಿದ್ದಾರೆ.

ಉತ್ತರದ ಗಡಿ ಪ್ರದೇಶದಲ್ಲಿ ಈಗಾಗಲೇ 12 ವ್ಯವಹಾರ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಳೀಯಕರಣ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News