3,37,281 ಅಕ್ರಮ ವಿದೇಶಿಗರನ್ನು ಬಂಧಿಸಿದ ಸೌದಿ ಅರೇಬಿಯ

Update: 2018-01-05 17:12 GMT

ಸೌದಿ ಅರೇಬಿಯ, ಜ.5: ಸೌದಿ ಅರೇಬಿಯದ ವಸತಿ ಮತ್ತು ಉದ್ಯೋಗ ನಿಯಮವಾಳಿಗಳನ್ನು ಉಲ್ಲಂಘಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಲು ನಡೆಯುತ್ತಿರುವ ರಾಷ್ಟ್ರವ್ಯಾಪಿ ಕಾರ್ಯಾಚರಣೆಯ ಭಾಗವಾಗಿ 3,37,281 ಅಕ್ರಮ ವಿದೇಶಿಗರನ್ನು ಬಂಧಿಸಲಾಗಿದೆ ಎಂದು ಸೌದಿ ಅರೇಬಿಯದ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಲ್ಲಿ ಬಹಳಷ್ಟು ಜನರು ಮನೆಯಿಲ್ಲದೆ ಮತ್ತು ಉದ್ಯೋಗ ಪರವಾನಿಗೆ ಇಲ್ಲದೆ ನೆಲೆಸಿದ್ದರು ಎಂದು ಅಧಿಕಾರಿಗಳು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನವೆಂಬರ್ 15ರಂದು ಆರಂಭವಾದ ಕಾರ್ಯಾಚರಣೆಯಲ್ಲಿ ಸರಿಯಾದ ವಸತಿ ಪರವಾನಿಗೆ ಇಲ್ಲದ 1,98,231 ಮತ್ತು ಉದ್ಯೋಗ ಪರವಾನಿಗೆ ಇಲ್ಲದ 99,980 ವಿದೇಶಿಗರನ್ನು ಬಂಧಿಸಿರುವುದಾಗಿ ಪತ್ರಿಕೆಗಳು ವರದಿ ಮಾಡಿವೆ. ಬಂಧಿತರ ಪೈಕಿ 65,715 ಮಂದಿಯನ್ನು ಈಗಾಗಲೇ ಅವರ ಸ್ವದೇಶಗಳಿಗೆ ಕಳುಹಿಸಿಕೊಡಲಾಗಿದೆ. ಎಲ್ಲ ಬಂಧಿತರ ಮತ್ತು ಸ್ವದೇಶಕ್ಕೆ ಕಳುಹಿಸಲಾಗಿರುವ ಜನರ ರಾಷ್ಟ್ರೀಯತೆಯ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದೆ. ಸೌದಿ ಅರೇಬಿಯದಲ್ಲಿ 3.2 ಮಿಲಿಯನ್ ಭಾರತೀಯರು ವಾಸಿಸುತ್ತಿದ್ದು ಅಲ್ಲಿ ನೆಲೆಸಿರುವ ಅತೀದೊಡ್ಡ ವಿದೇಶಿ ಸಮುದಾಯವಾಗಿದೆ.

ತಮ್ಮ ಇರುವಿಕೆಯ ಬಗ್ಗೆ ಸರಿಯಾದ ಪುರಾವೆಯನ್ನು ಒದಗಿಸದೆ ಇದ್ದರೆ ಅಥವಾ 90 ದಿನಗಳ ಒಳಗಾಗಿ ದೇಶವನ್ನು ತೊರೆದು ಹೋಗದಿದ್ದರೆ ಅಂಥ ವಿದೇಶಿಗರು 15,000 ರಿಯಲ್‌ನಿಂದ 1,00,000 ರಿಯಲ್ ವರೆಗೆ ದಂಡ ಪಾವತಿಸಬೇಕಾದೀತು ಎಂದು ಸೌದಿ ಆಡಳಿತವು ಕಳೆದ ವರ್ಷವೇ ಎಚ್ಚರಿಸಿತ್ತು. ಋಣಾತ್ಮಕ ಆರ್ಥಿಕತೆ ಮತ್ತು ಸಾಮಾಜಿಕ ಅನಿರೀಕ್ಷಿತ ಬೆಳವಣಿಗೆಗಳು ಮತ್ತು ವಿದೇಶಿಗರ ಹೆಚ್ಚುತ್ತಿರುವ ಸಂಖ್ಯೆಯಿಂದ ಆಗಬಹುದಾದ ಅಪಾಯವನ್ನು ನಿಯಂತ್ರಿಸುವ ಸಲುವಾಗಿ ಸೌದಿ ಆಡಳಿತವು ಕಳೆದ ವರ್ಷ ಮಾರ್ಚ್‌ನಲ್ಲಿ ದಾಖಲೆಗಳ ಅವಧಿ ಮುಗಿದ ನಂತರವೂ ಸೌದಿಯಲ್ಲಿ ವಾಸಿಸುತ್ತಿರುವ ವಿದೇಶಿಗರಿಗೆ 90 ದಿನಗಳ ಕ್ಷಮಾದಾನವನ್ನು ಘೋಷಿಸಿತ್ತು. ಈ ಅವಧಿಯ ಒಳಗೆ ಸೌದಿ ತೆರೆದ ವಿದೇಶಿಗರು ದಂಡ ಕಟ್ಟುವ ಅಥವಾ ಕಾನೂನು ಕ್ರಮಗಳನ್ನು ಎದುರಿಸುವ ಅಗತ್ಯವಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News