ಯಮನ್ ಗಡಿಯಲ್ಲಿ ಕ್ಷಿಪಣಿ ಹೊಡೆದುರುಳಿಸಿದ ಸೌದಿ

Update: 2018-01-05 17:49 GMT

ರಿಯಾದ್ (ಸೌದಿ ಅರೇಬಿಯ), ಜ. 5: ಯಮನ್ ಗಡಿಯ ಸಮೀಪ ಶುಕ್ರವಾರ ಸೌದಿ ಅರೇಬಿಯ ಪ್ರಕ್ಷೇಪಕ ಕ್ಷಿಪಣಿಯೊಂದನ್ನು ಹೊಡೆದುರುಳಿಸಿದೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ.

ಇದಕ್ಕೂ ಮೊದಲು, ಸೌದಿ ಅರೇಬಿಯದ ನೈರುತ್ಯ ಪ್ರಾಂತ ನಜ್ರಾನ್‌ನತ್ತ ಕ್ಷಿಪಣಿಯೊಂದನ್ನು ಹಾರಿಸಲಾಗಿದೆ ಎಂಬುದಾಗಿ ಯಮನ್‌ನ ಹೌದಿ ಬಂಡುಕೋರರು ಅಲ್-ಮಸೀರಾ ಟೆಲಿವಿಶನ್ ಚಾನೆಲ್‌ನಲ್ಲಿ ಪ್ರಸಾರಗೊಂಡ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.

ಸೌದಿ ಅರೇಬಿಯದ ವಾಯು ರಕ್ಷಣಾ ವ್ಯವಸ್ಥೆಯು ನಜ್ರಾನ್ ಆಕಾಶದಲ್ಲಿ ಕ್ಷಿಪಣಿಯನ್ನು ಹೊಡೆದುರುಳಿಸಿತು ಎಂದು ಸೌದಿ ಅರೇಬಿಯದ ಸರಕಾರಿ ಒಡೆತನದ ಟಿವಿ ಚಾನೆಲ್ ಅಲ್ ಅಕ್ಬರಿಯಾ ತಿಳಿಸಿತು.

ಇತ್ತೀಚಿನ ವಾರಗಳಲ್ಲಿ ಸೌದಿ ಅರೇಬಿಯ ನೆಲದ ಮೇಲೆ ಯಮನ್‌ನಿಂದ ಹಲವಾರು ಕ್ಷಿಪಣಿ ದಾಳಿಗಳನ್ನು ನಡೆಸಲಾಗಿರುವುದನ್ನು ಸ್ಮರಿಸಬಹುದಾಗಿದೆ.

ಯಮನ್‌ನಲ್ಲಿ ಆಂತರಿಕ ಸಂಘರ್ಷದಲ್ಲಿ ನಿರತವಾಗಿರುವ ಹೌದಿ ಬಂಡುಕೋರರಿಗೆ ಇರಾನ್ ಶಸ್ತ್ರಾಸ್ತ್ರಗಳನ್ನು ನೀಡುತ್ತಿದೆ ಎಂದು ಸೌದಿ ಅರೇಬಿಯ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News