11 ಸೌದಿ ರಾಜಕುಮಾರರ ಬಂಧನ

Update: 2018-01-06 17:19 GMT

ರಿಯಾದ್ (ಸೌದಿ ಅರೇಬಿಯ), ಜ. 6: ಸರಕಾರದ ಮಿತವ್ಯಯ ಕ್ರಮಗಳ ವಿರುದ್ಧ ಪ್ರತಿಭಟಿಸಲು ರಾಜಧಾನಿ ರಿಯಾದ್‌ನಲ್ಲಿರುವ ಅರಮನೆಯೊಂದರಲ್ಲಿ ಸೇರಿದ್ದ ಸೌದಿ ಅರೇಬಿಯದ 11 ರಾಜಕುಮಾರರನ್ನು ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಸೌದಿ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

ತಮ್ಮ ದೈನಂದಿನ ಬಳಕೆಯ ಸೇವೆಗಳ ಬಿಲ್ ಪಾವತಿಯನ್ನು ನಿಲ್ಲಿಸಿರುವುದು ಸೇರಿದಂತೆ ಸರಕಾರದ ಹಲವು ಮಿತವ್ಯಯ ಕ್ರಮಗಳ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದರು.

ಈ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಮಾಡಿದ ಕೋರಿಕೆಗೆ ಸೌದಿ ಅಧಿಕಾರಿಗಳು ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

ಜಗತ್ತಿನ ಅತಿ ದೊಡ್ಡ ತೈಲ ರಫ್ತು ದೇಶವಾಗಿರುವ ಸೌದಿ ಅರೇಬಿಯ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದೆ. ಸಬ್ಸಿಡಿಗಳನ್ನು ಕಡಿತಗೊಳಿಸುವುದು, ಮೌಲ್ಯವರ್ಧಿತ ಸೇವೆ (ವ್ಯಾಟ್)ಯನ್ನು ಜಾರಿಗೊಳಿಸುವುದು ಹಾಗೂ ರಾಜ ಕುಟುಂಬದ ಸದಸ್ಯರ ಸೌಲಭ್ಯಗಳನ್ನು ಕಡಿತಗೊಳಿಸುವುದು ಈ ಕ್ರಮಗಳಲ್ಲಿ ಸೇರಿದೆ.

ಕಚ್ಚಾ ತೈಲ ಬೆಲೆಯಲ್ಲಿನ ಕುಸಿತದಿಂದಾಗಿ 2018ರ ಬಜೆಟ್‌ನಲ್ಲಿ 195 ಬಿಲಿಯ ರಿಯಾಲ್ (3.30 ಲಕ್ಷ ಕೋಟಿ ರೂಪಾಯಿ) ಕೊರತೆಯುಂಟಾಗಿದೆ. ಇದನ್ನು ನಿಭಾಯಿಸುವುದಕ್ಕಾಗಿ ಮಿತವ್ಯಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ರಾಜ ಕುಟುಂಬದ ಸದಸ್ಯರ ನೀರು ಮತ್ತು ವಿದ್ಯುತ್ ಬಿಲ್‌ಗಳನ್ನು ಸರಕಾರ ಪಾವತಿಸುವುದನ್ನು ನಿಲ್ಲಿಸುವ ರಾಜಾಜ್ಞೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಒತ್ತಾಯಿಸುವುದಕ್ಕಾಗಿ ರಾಜಕುಮಾರರು ಐತಿಹಾಸಿಕ ಅರಮನೆ ‘ಕಸರ್ ಅ-ಹೊಕಮ್’ನಲ್ಲಿ ಸೇರಿದ್ದರು ಎಂದು ಆನ್‌ಲೈನ್ ಸುದ್ದಿ ವೆಬ್‌ಸೈಟ್ ‘ಸಬ್ಕ್.ಆರ್ಗ್’ ವರದಿ ಮಾಡಿದೆ.

ತಮ್ಮ ಸಂಬಂಧಿಕರೊಬ್ಬರ ವಿರುದ್ಧ ವಿಧಿಸಲಾಗಿರುವ ಮರಣ ದಂಡನೆಗೆ ಪರಿಹಾರ ನೀಡಬೇಕೆಂದೂ ಅವರು ಒತ್ತಾಯಿಸುತ್ತಿದ್ದರು.

‘‘ಅವರ ಬೇಡಿಕೆಗಳಲ್ಲಿರುವ ತಪ್ಪುಗಳನ್ನು ಅವರಿಗೆ ತಿಳಿಸಲಾಯಿತು. ಆದಾಗ್ಯೂ, ಅವರು ಅರಮನೆಯಿಂದ ತೆರಳಲು ನಿರಾಕರಿಸಿದರು’’ ಎಂದು ಮೂಲಗಳನ್ನು ಉಲ್ಲೇಖಿಸಿ ವೆಬ್‌ಸೈಟ್ ಹೇಳಿದೆ.

‘‘ಮಧ್ಯಪ್ರವೇಶಿಸುವಂತೆ ಭದ್ರತಾ ಸಿಬ್ಬಂದಿಗೆ ರಾಜಾಜ್ಞೆ ನೀಡಲಾಯಿತು. ಭದ್ರತಾ ಸಿಬ್ಬಂದಿಯು ರಾಜಕುಮಾರರನ್ನು ಬಂಧಿಸಿ ಅಲ್-ಹೇಯರ್ ಜೈಲಿಗೆ ಕಳುಹಿಸಿದರು’’ ಎಂದು ಅದು ಹೇಳಿದೆ.

ಕಳೆದ ವರ್ಷ ಭ್ರಷ್ಟಾಚಾರದ ವಿರುದ್ಧ ಕಾರ್ಯಾಚರಣೆ ನಡೆಸಿದ ಸೌದಿ ಅಧಿಕಾರಿಗಳು, ಡಝನ್‌ಗಟ್ಟಳೆ ರಾಜ ಕುಟುಂಬದ ಸದಸ್ಯರು ಹಾಗೂ ಹಾಲಿ ಮತ್ತು ಮಾಜಿ ಹಿರಿಯ ಅಧಿಕಾರಿಗಳನ್ನು ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News