ಯುಎಇ ಲಾಟರಿಯಲ್ಲಿ 20 ಕೋಟಿ ರೂ. ಗೆದ್ದ ಭಾರತೀಯ

Update: 2018-01-08 17:27 GMT

ದುಬೈ, ಜ. 8: ಯುಎಇಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರೊಬ್ಬರಿಗೆ 12 ಮಿಲಿಯ ದಿರ್ಹಮ್ (ಸುಮಾರು 20.75 ಕೋಟಿ ರೂಪಾಯಿ) ಲಾಟರಿ ಹೊಡೆದಿದೆ.

ದುಬೈಯ ಕಂಪೆನಿಯೊಂದರಲ್ಲಿ ಬಿಸ್ನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಕೇರಳದ 42 ವರ್ಷದ ಹರಿಕೃಷ್ಣನ್ ವಿ. ನಾಯರ್ ರವಿವಾರ ನಡೆದ ‘ಬಿಗ್ ಟಿಕೆಟ್’ ಲಾಟರಿ ಡ್ರಾದಲ್ಲಿ ಬೃಹತ್ ಮೊತ್ತವನ್ನು ಗೆದ್ದಿದ್ದಾರೆ.

ಅವರು 2002ರಿಂದ ಕುಟುಂಬ ಸದಸ್ಯರ ಜೊತೆ ಯುಎಇಯಲ್ಲಿ ವಾಸಿಸುತ್ತಿದ್ದಾರೆ.

‘‘ನನಗೆ ಈಗಲೂ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅದು ನಾನೇನಾ?’’ ಎಂದು ನಾಯರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು ತಾನು ಎರಡು ಬಾರಿ ಈ ಟಿಕೆಟ್‌ಗಳನ್ನು ಖರೀದಿಸಿದ್ದೆ, ಆದರೆ, ಆಗ ಬಹುಮಾನ ಸಿಕ್ಕಿರಲಿಲ್ಲ ಎಂದು ಅವರು ‘ಖಲೀಜ್ ಟೈಮ್ಸ್’ಗೆ ಹೇಳಿದರು.

‘‘ನಾನು ಕುಟುಂಬ ಸಮೇತ ವಿಶ್ವ ಪ್ರವಾಸ ಮಾಡಬೇಕೆಂದು ಅಂದುಕೊಳ್ಳುತ್ತಿದ್ದೆ. ಈಗ ಅದಕ್ಕೆ ಸಮಯ ಬಂದಿದೆ ಎಂದು ನನಗನಿಸುತ್ತದೆ’’ ಎಂದರು.

‘‘ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂದು ನಾನು ಯಾವಾಗಲೂ ಅಂದುಕೊಳ್ಳುತ್ತಿದ್ದೆ. ದೇವರ ದಯೆಯಿಂದ ನಾನೀಗ ಅದನ್ನು ಮಾಡಬಹುದಾಗಿದೆ. ಅದನ್ನು ನಾನು ಖಂಡಿತವಾಗಿಯೂ ಮಾಡುತ್ತೇನೆ’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News