ಸೌದಿ ಅರೇಬಿಯದಲ್ಲಿ ‘ಮಹಿಳೆಯರಿಗೆ ಮಾತ್ರ’ ಕಾರು ಶೋರೂಮ್ ಉದ್ಘಾಟನೆ

Update: 2018-01-12 17:01 GMT

ಸೌದಿ ಅರೇಬಿಯ, ಜ.12: ಸೌದಿ ಅರೇಬಿಯದಲ್ಲಿ ಮಹಿಳೆಯರು ವಾಹನ ಚಲಾಯಿಸಬಹುದು ಎಂಬ ನಿರ್ಧಾರವು ಜಾರಿಯಾಗಲು ಇನ್ನೂ ಐದು ತಿಂಗಳ ಕಾಲವಿದೆ. ಆದರೆ ಅದಾಗಲೇ ಅಲ್ಲಿನ ಖಾಸಗಿ ಸಂಸ್ಥೆಯೊಂದು ಕೇವಲ ಮಹಿಳೆಯರಿಗಾಗಿಯೇ ಕಾರು ಶೋರೂಮ್ ಒಂದನ್ನು ಗುರುವಾರ ತೆರೆದಿದೆ. ಜಿದ್ದಾದ ಪಶ್ಚಿಮ ಕೆಂಪು ಸಮುದ್ರ ಬಂದರು ನಗರಿಯ ಮಾಲ್‌ನಲ್ಲಿ ತೆರೆಯಲಾಗಿರುವ ಈ ಶೋರೂಮ್, ಮಹಿಳೆಯರಿಗೆ ತಮ್ಮ ಆಯ್ಕೆಯ ಕಾರನ್ನು ಖರೀದಿಸುವ ಸ್ವಾತಂತ್ರವನ್ನು ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.

ಕಳೆದ ವರ್ಷ ಸೌದಿ ದೊರೆ ಸಲ್ಮಾನ್ ತೆಗೆದುಕೊಂಡ ಐತಿಹಾಸಿಕ ನಿರ್ಧಾರದಲ್ಲಿ ಮೂರು ದಶಕಗಳಷ್ಟು ಹಳೆಯ ನಿಷೇಧವನ್ನು ತೆರವುಗೊಳಿಸಿ ಸೌದಿಯಲ್ಲಿ ಮಹಿಳೆಯರಿಗೆ ವಾಹನ ಚಾಲನೆ ಮಾಡುವ ಹಕ್ಕನ್ನು ನೀಡಿದ್ದರು.

ಸದ್ಯ ತೆರೆಯಲಾಗಿರುವ ಶೋರೂಮ್‌ನಲ್ಲಿ ವಿವಿಧ ಕಂಪೆನಿಗಳ ವಾಹನಗಳನ್ನು ಆಯ್ಕೆ ಮಾಡುವ ಅವಕಾಶವಿದ್ದು ಇಲ್ಲಿ ಕೇವಲ ಮಹಿಳಾ ಸಿಬ್ಬಂದಿಗಳನ್ನೇ ನೇಮಿಸಲಾಗಿದೆ. ಇಲ್ಲಿ ಮಹಿಳೆಯರಿಗೆ ಪ್ರಮುಖ ಬ್ಯಾಂಕ್‌ಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಮೂಲಕ ವಾಹನ ಸಾಲವನ್ನು ಪಡೆಯಲು ಕೂಡಾ ನೆರವು ನೀಡಲಾಗುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸೌದಿಯಲ್ಲಿ ಮಹಿಳೆಯರಿಗಾಗಿ ಇನ್ನಷ್ಟು ಶೋರೂಮ್‌ಗಳನ್ನು ತೆರೆಯುವ ಯೋಜನೆಯನ್ನು ಹಾಕಿಕೊಂಡಿರುವುದಾಗಿ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News