ಭ್ರಷ್ಟಾಚಾರ ಆರೋಪಿಗಳ ವಾಪಸಾತಿಗೆ ಮನವಿ ಮಾಡಲು ಸೌದಿ ನಿರ್ಧಾರ

Update: 2018-01-14 17:06 GMT

ರಿಯಾದ್, ಜ.14: ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದು, ಈಗ ವಿದೇಶದಲ್ಲಿ ನೆಲೆಸಿರುವ ಸೌದಿಯ ಪ್ರಜೆಗಳನ್ನು ಸ್ವದೇಶಕ್ಕೆ ವಾಪಸ್ ಕಳುಹಿಸುವಂತೆ ಆಯಾ ದೇಶಗಳಿಗೆ ಮನವಿ ಮಾಡಲಾಗುವುದೆಂದು ಸೌದಿ ಆರೇಬಿಯದ ಸರಕಾರಿ ಅಭಿಯೋಜಕರು ರವಿವಾರ ತಿಳಿಸಿದ್ದಾರೆ. ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿ ಸೌದಿಯ ಕೆಲವು ರಾಜವಂಶಸ್ಥರು ಹಾಗೂ ಉದ್ಯಮಿಗಳನ್ನು ಈಗಾಗಲೇ ಆಡಳಿತವು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.

 ಭ್ರಷ್ಟಾಚಾರದ ಆರೋಪ ಹೊತ್ತು, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಕೆಲವು ಸೌದಿ ಪ್ರಜೆಗಳನ್ನು ಸ್ವದೇಶಕ್ಕೆ ವಾಪಸ್ ಕಳುಹಿಸುವಂತೆ ಮನವಿ ಸಲ್ಲಿಸುವುದಕ್ಕಾಗಿ ಅವರ ವಿರುದ್ಧ ಸಮರ್ಪಕವಾದ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆಯೆಂದು ಸರಕಾರಿ ಅಭಿಯೋಜಕ ಸೌದ್ ಅಲ್ ಮುಯಾಜಬ್ ತಿಳಿಸಿದ್ದಾರೆ.

 ಆದರೆ ತಲೆಮರೆಸಿಕೊಂಡಿರುವ ಆರೋಪಿಗಳು ಯಾರು ಎಂಬುದನ್ನಾಗಲಿ ಅಥವಾ ಅವರು ಯಾವ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆಂಬುದನ್ನು ಬಹಿರಂಗಪಡಿಸಲು ಮುಯಾಜಬ್ ನಿರಾಕರಿಸಿದ್ದಾರೆ.

  ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರ ಆದೇಶದಂತೆ ಭ್ರಷ್ಟಾಚಾರ ಆರೋಪದಲ್ಲಿ ಸೌದಿಯ ರಾಜಕುಟುಂಬದ ಕೆಲವು ಸದಸ್ಯರು, ಉದ್ಯಮಿಗಳನ್ನು, ಬಂಧಿಸಲಾಗಿದ್ದು, ಅವರನ್ನೀಗ ರಿಯಾದ್‌ನ ವಿಲಾಸಿ ರಿಟ್ಜ್ ಕಾಲನ್ ಹೊಟೇಲ್‌ನಲ್ಲಿ ಬಂಧನದಲ್ಲಿಡಲಾಗಿದೆ.

ಈ ಮಧ್ಯೆ ಬಂಧಿತರಿಗೆ ಶಿಕ್ಷೆಯಿಂದ ವಿನಾಯಿತಿ ನೀಡುವ ಉದ್ದೇಶದಿಂದ ಅವರ ಜೊತೆ ಸೌದಿ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ಬಂಧಿತರಿಂದ ದೇಶದ ಬೊಕ್ಕಸಕ್ಕೆ 100 ಶತಕೋಟಿ ಡಾಲರ್‌ಗೂ ಅಧಿಕ ಹಣ ಬಾಕಿಯಿದ್ದು, ಅದನ್ನು ಪಾವತಿಸಿದಲ್ಲಿ ಶಿಕ್ಷೆಯಿಂದ ವಿನಾಯಿತಿ ನೀಡುವ ಸಾಧ್ಯತೆಯಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬಹುತೇಕ ಬಂಧಿತರು ಹಣ ಪಾವತಿಸಿ, ಪ್ರಕರಣಗಳನ್ನು ಇತ್ಯರ್ಥಪಡಿಸಲು ಒಪ್ಪಿಕೊಂಡಿದ್ದಾರೆ. ಆದರೆ ಕೆಲವರು ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲವೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News