ಕುವೈಟ್‍ಗೆ ನಾಗರಿಕರ ಪೂರೈಕೆಯನ್ನು ಸ್ಥಗಿತಗೊಳಿಸಿದ ಫಿಲಿಪ್ಪೀನ್ಸ್

Update: 2018-01-20 14:13 GMT

ಕುವೈಟ್‍ಸಿಟಿ, ಜ. 20: ಕುವೈಟ್‍ಗೆ ಕಾರ್ಮಿಕರನ್ನು ಕಳುಹಿಸುವುದನ್ನು ಸ್ಥಗಿತಗೊಳಿಸಿ ಫಿಲಿಪ್ಪೀನ್ಸ್ ಕಾರ್ಮಿಕ ಸಚಿವಾಲಯ ಆದೇಶ ಹೊರಡಿಸಿದೆ. ಕಾರ್ಮಿಕರೊಡನೆ ಕೆಟ್ಟ ವರ್ತನೆಗೆ ಸಂಬಂಧಿಸಿದ ಪ್ರಕರಣಗಳ ಹಿನ್ನೆಲೆಯಲ್ಲಿ ಕುವೈಟ್‍ಗೆ ಕಾರ್ಮಿಕರನ್ನು ಕಳುಹಿಸದಿರಲು ತೀರ್ಮಾನಿಸಲಾಗಿದೆ ಎಂದು ಕಾರ್ಮಿಕ ಕಲ್ಯಾಣ ಕಾರ್ಯದರ್ಶಿ ಸಿಲ್ವೆಸ್ಟರ್ ಬೆಲ್ಲೊ ತಿಳಿಸಿದ್ದಾರೆ. ಕುವೈಟ್‍ನಲ್ಲಿ ಏಳು ಫಿಲಿಪ್ಪೀನ್ಸ್ ನಾಗರಿಕರು ಮೃತಪಟ್ಟ ಪ್ರಕರಣಗಳ ತನಿಖೆ ಮುಗಿಯುವವರೆಗೆ ಆದೇಶ ಅನ್ವಯವಾಗಲಿದೆ.

ಮನೆಕೆಲಸದವರ ವಿರುದ್ಧ ಲೈಂಗಿಕ ಕಿರುಕುಳ ತಡೆಯಲು ಸ್ಪಷ್ಟ ಕಾನೂನು ರಚಿಸದಿದ್ದರೆ ಕುವೈಟ್‍ಗೆ ಮನೆಕೆಲಸದವರನ್ನು ಕಳುಹಿಸುವುದನ್ನು ನಿಲ್ಲಿಸಲಾಗುವುದು ಎಂದು ಫಿಲಿಪ್ಪೀನ್ಸ್ ಅಧ್ಯಕ್ಷ ರೋಡ್ರಿಗೊ ಡುಟಾರ್ಟೆ ಹೇಳಿಕೆ ನೀಡಿದ ಬೆನ್ನಿಗೆ ಕಾರ್ಮಿಕರ ಸರಬರಾಜು ನಿಲ್ಲಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಕುವೈಟ್‍ನಲ್ಲಿ ಎರಡೂವರೆ ಲಕ್ಷದಷ್ಟು ಫಿಲಿಪ್ಪೀನ್ಸ್ ನಾಗರಿಕರು ಕೆಲಸಮಾಡುತ್ತಿದ್ದು, ಇವರಲ್ಲಿ ಹೆಚ್ಚಿನವರು ಮನೆಕೆಲಸದಲ್ಲಿದ್ದಾರೆ. ಯುಎಇ, ಸೌದಿ ಅರೇಬಿಯ, ಕತರ್ ಮೊದಲಾದ ಗಲ್ಫ್ ದೇಶಗಳಲ್ಲಿ ಫಿಲಿಪ್ಪೀನ್ ಜನರು ಕೆಲಸ ಮಾಡುತ್ತಿದ್ದಾರೆ.

ಒಟ್ಟು 23 ಲಕ್ಷ ಫಿಲಿಪ್ಪಿನೊಗಳು ವಿದೇಶಗಳಲ್ಲಿ ದುಡಿಯುತ್ತಿದ್ದಾರೆ. ಇವರಲ್ಲಿ ಶೇ. 10ರಲ್ಲಿ ಒಂದಂಶ ಮಂದಿ ಕುವೈಟ್‍ನಲ್ಲಿ ಕೆಲಸಮಾಡುತ್ತಿದ್ದಾರೆ. ಪ್ರತಿತಿಂಗಳು 200 ಕೋಟಿ ಡಾಲರ್ ವಿದೇಶ ವಿನಿಮಯ ವರಮಾನ ಫಿಲಿಪ್ಪೀನ್ಸ್‍ಗೆ ಸಿಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News