ಯಮನ್ ಅಧ್ಯಕ್ಷೀಯ ಅರಮನೆಗೆ ಬಂಡುಕೋರರ ಮುತ್ತಿಗೆ

Update: 2018-01-30 17:11 GMT

ಸನಾ (ಯಮನ್), ಜ. 30: ಸೋಮವಾರ ರಾತ್ರಿಯ ಭೀಕರ ಕಾಳಗದ ಬಳಿಕ, ದಕ್ಷಿಣದ ಬಂದರು ನಗರ ಏಡನ್‌ನಲ್ಲಿರುವ ಅಧ್ಯಕ್ಷೀಯ ಅರಮನೆಯನ್ನು ಪ್ರತ್ಯೇಕತಾವಾದಿಗಳು ವಶಪಡಿಸಿಕೊಂಡಿದ್ದು, ಅಲ್ಲಿಂದ ಪರಾರಿಯಾಗಲು ದೇಶದ ಪ್ರಧಾನಿ ಅಹ್ಮದ್ ಉಬೈದ್ ಬಿನ್ ಡಘರ್ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಯಮನ್ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

‘ಸದರ್ನ್ ಟ್ರಾನ್ಸಿಶನಲ್ ಕೌನ್ಸಿಲ್’ಗೆ ನಿಷ್ಠೆ ಹೊಂದಿರುವ ಹೋರಾಟಗಾರರು ಯುದ್ಧ ಮಾಡುತ್ತಾ ಏಡನ್‌ನ ಕ್ರೇಟರ್ ಜಿಲ್ಲೆಯಲ್ಲಿರುವ ‘ಮಾಶಿಕ್’ ಅರಮನೆಯ ದ್ವಾರದವರೆಗೆ ಬಂದಿದ್ದಾರೆ.

ಈ ಅರಮನೆಯು ಯಮನ್‌ನ ಅಂತಾರಾಷ್ಟ್ರೀಯ ಬೆಂಬಲಿತ ಸರಕಾರದ ಕೇಂದ್ರವಾಗಿದೆ.

ಪ್ರಧಾನಿ ಅಹ್ಮದ್ ಉಬೈದ್ ಬಿನ್ ಡಘರ್ ತಕ್ಷಣ ಅರಮನೆಯಿಂದ ಪರಾರಿಯಾಗಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮೊದಲು ಪ್ರತ್ಯೇಕತಾವಾದಿಗಳು ರಾಜೀನಾಮೆ ನೀಡಲು ಸರಕಾರಕ್ಕೆ ಗಡುವು ನೀಡಿದ್ದರು. ಆ ಗಡುವು ಮುಗಿದ ಬಳಿಕ ರವಿವಾರ ಏಡನ್‌ನಲ್ಲಿ ಕಾಳಗ ಆರಂಭಗೊಂಡಿದೆ.

ಈ ನಡುವೆ, ಅಧ್ಯಕ್ಷ ಮನ್ಸೂರ್ ಹದಿ ಪ್ರತ್ಯೇಕತಾವಾದಿಗಳ ಕೃತ್ಯವನ್ನು ‘ಕ್ಷಿಪ್ರಕ್ರಾಂತಿ’ ಎಂಬುದಾಗಿ ಬಣ್ಣಿಸಿದ್ದಾರೆ.

ಭೀಕರ ಕಾಳಗ: 36 ಸಾವು; 185 ಮಂದಿಗೆ ಗಾಯ

ಯಮನ್‌ನ ಮಧ್ಯಾಂತರ ರಾಜಧಾನಿ ಏಡನ್‌ನಲ್ಲಿ ಸರಕಾರಿ ಪಡೆಗಳು ಮತ್ತು ಪ್ರತ್ಯೇಕತಾವಾದಿಗಳ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ ಎರಡು ದಿನಗಳ ಅವಧಿಯಲ್ಲಿ ಕನಿಷ್ಠ 36 ಮಂದಿ ಮೃತಪಟ್ಟಿದ್ದಾರೆ ಹಾಗೂ 185 ಮಂದಿ ಗಾಯಗೊಂಡಿದ್ದಾರೆ ಎಂದು ರೆಡ್‌ಕ್ರಾಸ್ ಹೇಳಿದೆ.

ಕಾಳಗದ ಎರಡನೆ ದಿನವಾದ ಸೋಮವಾರ ರಾತ್ರಿ ಯುದ್ಧನಿರತ ಉಭಯ ಬಣಗಳು ಟ್ಯಾಂಕ್‌ಗಳು ಮತ್ತು ಫಿರಂಗಿಗಳನ್ನು ಬಳಸಿದ್ದು, ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಯಮನ್‌ನ ಅಧಿಕೃತ ಸರಕಾರಕ್ಕೆ ಬೆಂಬಲ ನೀಡುತ್ತಿರುವ ಸೌದಿ ಅರೇಬಿಯ ನೇತೃತ್ವದ ಸೇನಾ ಮಿತ್ರಕೂಟವು, ತಕ್ಷಣ ಯುದ್ಧವಿರಾಮ ಆಚರಿಸುವಂತೆ ಹಾಗೂ ಎಲ್ಲ ರೀತಿಯ ಸಶಸ್ತ್ರ ಸಂಘರ್ಷವನ್ನು ನಿಲ್ಲಿಸುವಂತೆ ಕರೆ ನೀಡಿದೆ ಎಂದು ಸೌದಿ ಅರೇಬಿಯದ ಸರಕಾರಿ ಸುದ್ದಿ ಸಂಸ್ಥೆ ಎಸ್‌ಪಿಎ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಏಡನ್‌ನಲ್ಲಿ ನಡೆಯುತ್ತಿರುವ ಕಾಳಗದಲ್ಲಿ 36 ಮಂದಿ ಮೃತಪಟ್ಟಿದ್ದಾರೆ ಹಾಗೂ 185 ಮಂದಿ ಗಾಯಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ ಯಮನ್ ಘಟಕದ ಮುಖ್ಯಸ್ಥ ಕಾರ್ಲೋಸ್ ಬ್ಯಾಟಲಸ್ ಸೋಮವಾರ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ನಾಗರಿಕ ಸಾವು ನೋವಿನ ವಿವರಗಳನ್ನು ಅದು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News