ತುಂಬೆ ಆಸ್ಪತ್ರೆಯಲ್ಲಿ ಭುಜದ ಸಂಕೀರ್ಣ ಶಸ್ತ್ರಚಿಕಿತ್ಸೆ: ಆರು ತಿಂಗಳಲ್ಲೇ ಕೆಲಸಕ್ಕೆ ಮರಳಿದ ಟ್ರಕ್ ಚಾಲಕ

Update: 2018-02-05 17:50 GMT

ದುಬೈ, ಫೆ.5: ಇಲ್ಲಿನ ತುಂಬೆ ಆಸ್ಪತ್ರೆಯಲ್ಲಿ ಭುಜದ ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಪಾಕಿಸ್ತಾನ ಮೂಲದ ಟ್ರಕ್ ಚಾಲಕರೊಬ್ಬರು ಆರು ತಿಂಗಳ ಒಳಗಾಗಿ ಸಂಪೂರ್ಣ ಗುಣಮುಖರಾಗಿ ಕೆಲಸಕ್ಕೆ ಮರಳಿದ್ದಾರೆ.

ಕಳೆದ ವಾರ ಆಸ್ಪತ್ರೆಗೆ ಮರುಪರಿಶೀಲನೆಗಾಗಿ ಆಗಮಿಸಿದ್ದ ಪಾಕಿಸ್ತಾನಿ ಪ್ರಜೆ ಜಹನ್ಝೇಬ್ ಖಾನ್ ಮುಹಮ್ಮದ್ ಸಿದ್ದಿಕಿಯವರು ಕೆಲಸಕ್ಕೆ ಮರಳಲು ಸಂಪೂರ್ಣವಾಗಿ ಸಮರ್ಥರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದರು.

2017ರ ಎಪ್ರಿಲ್ 14ರಂದು ರಸ್ತೆ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಸಿದ್ದಿಕಿಯನ್ನು ದುಬೈಯ ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ ಅವರಿಗೆ ತಮ್ಮ ಬಲಭುಜದಲ್ಲಿ ತೀವ್ರ ನೋವಿತ್ತು.ಅಪಘಾತದಲ್ಲಿ ಭುಜದ ಕೀಲು ಪುಡಿಯಾಗಿದ್ದ ಕಾರಣ ರೋಗಿಯು ತೀವ್ರ ನೋವಿನಿಂದ ನರಳಾಡುತ್ತಿದ್ದರೆ ಈ ರೀತಿ ಜಖಂಗೊಂಡ ಕೀಲನ್ನು ಸರಿಪಡಿಸುವುದು ವೈದ್ಯರ ಪಾಲಿಗೂ ಸವಾಲೇ ಆಗಿತ್ತು. 156ಕೆ.ಜಿ ತೂಕವಿದ್ದ ಅವರ ದೇಹಭಾರ ಕೂಡಾ ವೈದ್ಯರಿಗೆ ಹೆಚ್ಚು ತಲೆನೋವುಂಟು ಮಾಡಿತ್ತು.

ಭುಜವನ್ನು ಸರಿಪಡಿಸಿ ರೋಗಿಯು ಹಿಂದಿನಂತೆ ತಮ್ಮ ಕಾರ್ಯಗಳನ್ನು ಮಾಡಲು ಸಮರ್ಥವಾಗಿ ಉದ್ಯೋಗಕ್ಕೆ ತೆರಳುವಂತೆ ಮಾಡುವ ಸವಾಲು ತುಂಬೆ ಆಸ್ಪತ್ರೆಯ ವೈದ್ಯರ ಮುಂದಿತ್ತು. ಭುಜವು ಸರಿಯಾಗದಿದ್ದರೆ ಘನವಾಹನಗಳನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ.

ಸವಾಲನ್ನು ಸ್ವೀಕರಿಸಿದ ಡಾ. ರಾಜೇಶ್ ಗರ್ಗ್ (ಎಂಸಿಎಚ್, ಎಂಎಸ್; ಎಲುಬು ಶಸ್ತ್ರಚಿಕಿತ್ಸೆ ಪರಿಣತರು, ತುಂಬೆ ಆಸ್ಪತ್ರೆ, ದುಬೈ) ಅವರ ನೇತೃತ್ವದ ಪರಿಣತ ಶಸ್ತ್ರಚಿಕಿತ್ಸಕರ ತಂಡ ರೋಗಿಯ ಭುಜದ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸಿ 2017ರ ಎಪ್ರಿಲ್ 23ರಂದು ಬಲಭುಜದ ಬದಲಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದರು. ತಮ್ಮ ಅಂತಾರಾಷ್ಟ್ರೀಯ ಅನುಭವದೊಂದಿಗೆ ಡಾ. ರಾಜೇಶ್ ಗರ್ಗ್ ಅವರು ಭಾರತ ಮತ್ತು ಯುಎಇಯಲ್ಲಿ 3000ಕ್ಕೂ ಅಧಿಕ ಕೀಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ.

ಶಸ್ತ್ರಚಿಕಿತ್ಸೆಯ ಕೋಣೆಯಲ್ಲಿರುವ ಹಾಸಿಗೆಯಿಂದ ಹಿಡಿದು ಆ ಹಾಸಿಗೆ ಮೇಲೆ ರೋಗಿಯನ್ನು ಮಲಗಿಸುವ ಮತ್ತು ಅವರಿಗೆ ಅನಸ್ತೇಶಿಯಾ ನೀಡುವವರೆಗೆ ಈ ರೋಗಿಯ ವಿಷಯದಲ್ಲಿ ಎಲ್ಲವೂ ಸವಾಲಿನ ಕೆಲಸವಾಗಿತ್ತು. ಎಲ್ಲವೂ ಅವರ ದೇಹ ತೂಕದ ಪರಿಣಾಮ. ಈ ಶಸ್ತ್ರಚಿಕಿತ್ಸೆಯನ್ನು ಮುಗಿಸಲು ನಾವು ನಾಲ್ಕು ಗಂಟೆಗಳನ್ನು ತೆಗೆದುಕೊಂಡೆವು. ಸಾಮಾನ್ಯವಾಗಿ ನಾವು ತೆಗೆದುಕೊಳ್ಳುವ ಸಮಯದಿಂದ ಇದು ದುಪ್ಪಟ್ಟಾಗಿದೆ ಎಂದು ಹೇಳುತ್ತಾರೆ ಡಾ. ರಾಜೇಶ್ ಗರ್ಗ್.

ಕಳೆದ ವಾರ ಆಸ್ಪತ್ರೆಗೆ ಭೇಟಿ ನೀಡಿದ ಸಿದ್ದಿಕಿ, ಶಸ್ತ್ರಚಿಕಿತ್ಸೆ ನಡೆಸಿ ತನ್ನ ಜೀವನಕ್ಕೆ ಬಹುದೊಡ್ಡ ಉಡುಗೊರೆಯನ್ನು ನೀಡಿದ ವೈದ್ಯರಿಗೆ ಹಾಗೂ ತುಂಬೆ ಆಸ್ಪತ್ರೆಗೆ ತಾನು ಚಿರಋಣಿ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News