ಸೌದಿಯಲ್ಲಿ ವಿದೇಶೀಯರಿಗೆ 12 ಉದ್ಯೋಗಗಳ ನಿಷೇಧ: ಸಂಕಷ್ಟದಲ್ಲಿ ಭಾರತೀಯರು

Update: 2018-02-06 15:47 GMT

ರಿಯಾದ್, ಫೆ. 6: ಸೌದಿ ಅರೇಬಿಯವು ತನ್ನ ರಾಷ್ಟ್ರೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವುದಕ್ಕಾಗಿ ವಿದೇಶೀಯರಿಗೆ 12 ಉದ್ಯೋಗಗಳನ್ನು ನಿಷೇಧಿಸಲಿದೆ.

ಕೊಲ್ಲಿ ದೇಶದ ಈ ಕ್ರಮವು ಭಾರತ ಮತ್ತು ದಕ್ಷಿಣ ಏಶ್ಯ ದೇಶಗಳ ಭಾರೀ ಸಂಖ್ಯೆಯ ಕೆಲಸಗಾರರ ಮೇಲೆ ಪರಿಣಾಮ ಬೀರಲಿದೆ.

ಸೆಪ್ಟಂಬರ್ 11ರಂದು ಆರಂಭಗೊಳ್ಳಲಿರುವ ಮುಂದಿನ ಹಿಜರಿ ವರ್ಷದಿಂದ ವಿದೇಶೀಯರಿಗೆ ಹಲವು ಉದ್ಯೋಗಗಳನ್ನು ನಿಷೇಧಿಸಿ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಅಲಿ ಅಲ್-ಗಫೀಸ್ ಕಳೆದ ತಿಂಗಳು ಆದೇಶವೊಂದನ್ನು ಹೊರಡಿಸಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಗಡಿಯಾರಗಳು, ಕನ್ನಡಕಗಳು, ವೈದ್ಯಕೀಯ ಸಲಕರಣೆಗಳು, ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಸ್ತುಗಳು, ಕಾರು ಬಿಡಿ ಭಾಗಗಳು, ಕಟ್ಟಡ ಸಾಮಗ್ರಿಗಳು, ನೆಲಹಾಸುಗಳು, ಆಟೊಮೊಬೈಲ್ ಮತ್ತು ಮೋಟರ್‌ಸೈಕಲ್‌ಗಳು, ಪೀಠೋಪಕರಣಗಳು ಮತ್ತು ರೆಡಿಮೇಡ್ ಕಚೇರಿ ಸಾಮಗ್ರಿಗಳು, ರೆಡಿಮೇಡ್ ಬಟ್ಟೆಗಳು, ಮಕ್ಕಳ ಬಟ್ಟೆಗಳು ಮತ್ತು ಪುರುಷರ ಬಟ್ಟೆಗಳು, ಮನೆ ಬಳಕೆಯ ಪಾತ್ರೆಗಳು ಮತ್ತು ಪಾಸ್ಟ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ವಿದೇಶೀಯರಿಗೆ ಇನ್ನು ಮುಂದೆ ಕೆಲಸವಿಲ್ಲ.

ಈ ವರ್ಷದ ಸೆಪ್ಟಂಬರ್ ಮತ್ತು 2019 ಜನವರಿ ನಡುವಿನ ಅವಧಿಯಲ್ಲಿ ಮೂರು ಹಂತಗಳಲ್ಲಿ ನಿಷೇಧವನ್ನು ಜಾರಿಗೊಳಿಸಲಾಗುವುದು.

ಸೌದಿ ಅರೇಬಿಯದಲ್ಲಿ ಸುಮಾರು 32 ಲಕ್ಷ ಭಾರತೀಯರಿದ್ದಾರೆ. ಇದು ಸೌದಿ ಅರೇಬಿಯದಲ್ಲಿರುವ ಅತಿ ದೊಡ್ಡ ವಿದೇಶಿ ಸಮುದಾಯವಾಗಿದೆ. ಹಾಗಾಗಿ, ಸೌದಿ ಅರೇಬಿಯದ ಈ ಕ್ರಮವು ಭಾರತೀಯರ ಮೇಲೆ ಅತಿ ಹೆಚ್ಚಿನ ಪರಿಣಾಮವನ್ನು ಬೀರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News