ಮೋದಿ ದುಬೈ ಪ್ರವಾಸದಲ್ಲಿ ಏನೇನು ಕಾರ್ಯಕ್ರಮಗಳಿವೆ?

Update: 2018-02-08 17:01 GMT

ದುಬೈ, ಫೆ. 8: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಶನಿವಾರ ಯುಎಇ ತಲುಪಲಿದ್ದಾರೆ. ಈ ಸಂದರ್ಭದಲ್ಲಿ ಅವರು ಯುಎಇಯ ಆಡಳಿತಗಾರರು, ಸಮುದಾಯ ಸದಸ್ಯರು ಮತ್ತು ವ್ಯಾಪಾರಿಗಳನ್ನು ಭೇಟಿಯಾಗಲಿದ್ದಾರೆ. ಹಾಗೂ ವಿಶ್ವ ಸರಕಾರಿ ಸಮ್ಮೇಳನದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ, ರವಿವಾರ ಅವರು ಅಬುಧಾಬಿಯ ಪ್ರಥಮ ಹಿಂದೂ ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಶಿಲಾನ್ಯಾಸವನ್ನು ಅವರು ದುಬೈಯಿಂದಲೇ ವೀಡಿಯೊ ಲಿಂಕ್ ಮೂಲಕ ನಡೆಸಲಿದ್ದಾರೆ.

ದೇವಾಲಯವು ಭಾರತೀಯ ಸಂಸ್ಕೃತಿಯನ್ನು ಹಾಗೂ ಯುಎಇಯ ಸಹಿಷ್ಣುತೆಯನ್ನು ಬಿಂಬಿಸಲಿದೆ ಎಂದು ಯುಎಇಗೆ ಭಾರತದ ರಾಯಭಾರಿ ನವದೀಪ್ ಸಿಂಗ್ ಸೂರಿ ಹೇಳಿದ್ದಾರೆ.

ಯುಎಇಯ ಯುದ್ಧ ಸ್ಮಾರಕ ವಹತ್ ಅಲ್ ಕರಮದಲ್ಲಿ ಮೋದಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

‘‘ಶನಿವಾರ ಸಂಜೆ ಪ್ರಧಾನಿ ಅಬುಧಾಬಿಯಲ್ಲಿರುತ್ತಾರೆ. ಸರಕಾರಿ ಪ್ರವಾಸದ ಭಾಗವಾಗಿ ಅವರು ಅಬುಧಾಬಿಯ ಯುವರಾಜ ಹಾಗೂ ಯುಎಇ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್ ಶೇಖ್ ಮುಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯನ್‌ರನ್ನು ಭೇಟಿಯಾಗಲಿದ್ದಾರೆ. ರವಿವಾರ ಅವರು ದುಬೈಗೆ ತೆರಳುತ್ತಾರೆ. ಅಲ್ಲಿ ಅವರು ಭಾರತೀಯ ಸಮುದಾಯದವರನ್ನು ಭೇಟಿಯಾಗುತ್ತಾರೆ’’ ಎಂದು ಸೂರಿ ತಿಳಿಸಿದರು.

ಬಳಿಕ ಮೋದಿ ದುಬೈ ಒಪೇರಾ ಹೌಸ್‌ನಲ್ಲಿ ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಭಾರತೀಯ ಸಂಸ್ಕೃತಿ, ಯುಎಇಯ ಸಹಿಷ್ಣುತೆ ಪ್ರತಿಫಲಿಸುವ ದೇವಾಲಯ

‘‘ಈ ದೇವಸ್ಥಾನಕ್ಕೆ ವಿಶಾಲ ಜಾಗವನ್ನು ನೀಡಿ ಔದಾರ್ಯ ಪ್ರದರ್ಶಿಸಿರುವ ಶೇಖ್ ಮುಹಮ್ಮದ್‌ಗೆ ನಾನು ವಿಶೇಷ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ. ದೇವಸ್ಥಾನ ನಿರ್ಮಾಣಗೊಂಡ ಬಳಿಕ, ಅದು ಇಲ್ಲಿನ ಭಾರತೀಯ ಸಂಸ್ಕೃತಿಯನ್ನು ಮಾತ್ರವಲ್ಲ ಯುಎಇಯ ಸಹಿಷ್ಣುತೆಯನ್ನೂ ಪ್ರತಿಫಲಿಸುತ್ತದೆ. ಯುಎಇಯು ವೈವಿಧ್ಯತೆಯನ್ನು ಅನುಸರಿಸುತ್ತಿದೆ ಹಾಗೂ ಎಲ್ಲಾ ಸಮುದಾಯಗಳು ತಮ್ಮ ಧರ್ಮ, ಸಂಸ್ಕೃತಿ, ಅಸ್ಮಿತೆ ಮತ್ತು ಭಾಷೆಯನ್ನು ಅನುಸರಿಸಲು ಅವಕಾಶ ಕಲ್ಪಿಸುತ್ತದೆ’’ ಎಂದು ಯುಎಇಗೆ ಭಾರತದ ರಾಯಭಾರಿ ನವದೀಪ್ ಸಿಂಗ್ ಸೂರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News