ನಾಳೆ ಶಿಲಾನ್ಯಾಸ ನಡೆಯುವ ಅಬುಧಾಬಿಯ ಪ್ರಪ್ರಥಮ ದೇವಾಲಯ ಎಷ್ಟು ದೊಡ್ಡ ಪ್ರದೇಶದಲ್ಲಿ ತಲೆ ಎತ್ತಲಿದೆ ಗೊತ್ತೇ ?

Update: 2018-02-10 15:02 GMT

ಅಬುಧಾಬಿ (ಯುಎಇ), ಫೆ. 10: ಅಬುಧಾಬಿಯಲ್ಲಿ ನಿರ್ಮಾಣಗೊಳ್ಳಲಿರುವ ಹಿಂದೂ ದೇವಾಲಯವೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ರವಿವಾರ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಅಬುಧಾಬಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊದಲ ಹಿಂದೂ ದೇವಾಲಯ ಇದಾಗಿದೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಐತಿಹಾಸಿಕ ಘಟನೆಯಾಗಿರುತ್ತದೆ ಎಂದು ಯುಎಇಗೆ ಭಾರತದ ರಾಯಭಾರಿ ನವದೀಪ್ ಸಿಂಗ್ ಸೂರಿ ಹೇಳಿದ್ದಾರೆ.

55,000 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ದೇವಾಲಯವು 2020ರ ವೇಳೆಗೆ ಸಂಪೂರ್ಣಗೊಳ್ಳಲಿದೆ. ಎಲ್ಲ ಧಾರ್ಮಿಕ ಹಿನ್ನೆಲೆಯವರಿಗೂ ದೇವಸ್ಥಾನ ಪ್ರವೇಶ ಮುಕ್ತವಾಗಿದೆ ಎಂದು ಅವರು ತಿಳಿಸಿದರು.

‘‘ದುಬೈ ಒಪೇರಾ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ. ಎಲ್ಲ ಪ್ರಮುಖ ಸಂಘಟನೆಗಳ ಪ್ರತಿನಿಧಿಗಳು ಮತ್ತು ಪ್ರಮುಖ ಭಾರತೀಯರನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮವು ಐತಿಹಾಸಿಕವಾಗಿರುತ್ತದೆ. ಯಾಕೆಂದರೆ ಈ ಸಂದರ್ಭದಲ್ಲಿ ಅಬುಧಾಬಿಯ ಮೊದಲ ಹಿಂದೂ ದೇವಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ. ದುಬೈ-ಅಬುಧಾಬಿ ಶೇಖ್ ಝಾಯೇದ್ ಹೈವೇ ಹಾದು ಹೋಗುವ ಅಲ್ ರಹಬ ಸಮೀಪ ನಮಗೆ 55,000 ಚದರ ಮೀಟರ್ ಜಾಗ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದೆ’’ ಎಂದು ಸೂರಿ ನುಡಿದರು.

ಅಬುಧಾಬಿಯಲ್ಲಿ ನಡೆಯಲಿರುವ ದೇವಾಲಯದ ಶಂಕುಸ್ಥಾಪನೆಗೆ ಪ್ರಧಾನಿ ಮೋದಿ ದುಬೈಯಿಂದ ವೀಡಿಯೊ ಲಿಂಕ್ ಮೂಲಕ ಚಾಲನೆ ನೀಡಲಿದ್ದಾರೆ.

ಒಳಗೆ ಬಾಕ್ದ್

ಭಾರತದಲ್ಲಿ ಕೆತ್ತನೆ, ಅಬುಧಾಬಿಯಲ್ಲಿ ಜೋಡಣೆ

ವಾಸ್ತುಶಿಲ್ಪ ಅದ್ಭುತವಾಗಲಿರುವ ಈ ದೇವಸ್ಥಾನವನ್ನು ಭಾರತೀಯ ಕರಕುಶಲರ್ಮಿಗಳು ಕೈಯಿಂದ ಕೆತ್ತಲಿದ್ದಾರೆ. ಅವುಗಳನ್ನು ಬಳಿಕ ಅಬುಧಾಬಿಯಲ್ಲಿ ಜೋಡಿಸಲಾಗುತ್ತದೆ.

ಸಾಂಪ್ರದಾಯಿಕ ಹಿಂದೂ ದೇವಾಲಯವೊಂದರ ಎಲ್ಲ ಅಂಶಗಳನ್ನು ಈ ದೇವಾಲಯವು ಒಳಗೊಳ್ಳಲಿದೆ.

ಒಳಗೆ ಬಾಕ್ಸ್

“ಜಾಗತಿಕ ಸೌಹಾರ್ದಕ್ಕೆ ರಹದಾರಿ” :

  ಅಬುಧಾಬಿಯ ಯುವರಾಜ ಹಾಗೂ ಯುಎಇ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್ ಶೇಖ್ ಮುಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯನ್ ಹಿಂದೂ ದೇವಾಲಯಕ್ಕಾಗಿ ಉದಾರವಾಗಿ ಭೂಮಿ ನೀಡಿದ್ದಾರೆ. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ನಂಟು ಜಾಗತಿಕ ಸೌಹಾರ್ದಕ್ಕೆ ರಹದಾರಿ ಎನ್ನುವ ಪ್ರಬಲ ಸಂದೇಶವೊಂದನ್ನು ಇದು ನೀಡಿದೆ ಎಂದು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ಮುಖ್ಯ ವಕ್ತಾರ ಸಾಧು ಬ್ರಹ್ಮವಿಹಾರಿದಾಸ್ ಹೇಳಿದ್ದಾರೆ.

ದೇವಸ್ಥಾನದ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಯ ಹೊಣೆಯನ್ನು ಸ್ವಾಮಿನಾರಾಯಣ ಸಂಸ್ಥೆಗೆ ವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News