ತಂತ್ರಜ್ಞಾನವನ್ನು ಅಭಿವೃದ್ಧಿಗಾಗಿ ಬಳಸಬೇಕು, ವಿನಾಶಕ್ಕಾಗಿಯಲ್ಲ: ದುಬೈಯಲ್ಲಿ ಪ್ರಧಾನಿ ಮೋದಿ

Update: 2018-02-11 16:37 GMT

ದುಬೈ, ಫೆ.11: ಉಗ್ರಗಾಮಿಗಳು ಅಂತರ್ಜಾಲವನ್ನು ತೀವ್ರಗಾಮಿಗೊಳಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಸರಕಾರಗಳು ತಂತ್ರಜ್ಞಾನದ ದುರುಪಯೋಗವಾಗುವುದನ್ನು ತಡೆಯಬೇಕು ಎಂದು ಕರೆ ನೀಡಿದರು. ತಂತ್ರಜ್ಞಾನವನ್ನು ಅಭಿವೃದ್ಧಿಗಾಗಿ ಬಳಸಬೇಕೇ ಹೊರತು ವಿನಾಶಕ್ಕಾಗಿಯಲ್ಲ ಎಂದು ಅವರು ಈ ವೇಳೆ ತಿಳಿಸಿದರು.

ತಮ್ಮ ಯುಎಇ ಪ್ರವಾಸದ ಎರಡನೇ ದಿನದಂದು ದುಬೈಯಲ್ಲಿ ಜಾಗತಿಕ ಸರಕಾರಿ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಮೋದಿ, ಇಷ್ಟೊಂದು ಅಭಿವೃದ್ಧಿಯಾಗಿದ್ದರೂ ಬಡತನ ಮತ್ತು ಅಪೌಷ್ಠಿಕತೆಯನ್ನು ಹೋಗಲಾಡಿಸಲು ಇನ್ನೂ ಕೂಡಾ ಸಾಧ್ಯವಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ಒಂದೆಡೆ ನಾವು ಕ್ಷಿಪಣಿ ಮತ್ತು ಬಾಂಬ್‌ಗಳನ್ನು ತಯಾರಿಸಲು ನಮ್ಮ ಹಣ, ಸಮಯ ಮತ್ತು ಸಂಪನ್ಮೂಲದ ಬಹುಪಾಲನ್ನು ವ್ಯಯಿಸುತ್ತಿದ್ದೇವೆ. ಆದರೆ ನಾವು ತಂತ್ರಜ್ಞಾನವನ್ನು ಅಭಿವೃದ್ಧಿಯ ದೃಷ್ಟಿಯಿಂದ ನೋಡಬೇಕು ವಿನಾಶದ ದೃಷ್ಟಿಯಿಂದಲ್ಲ ಎಂದವರು ಹೇಳಿದರು.

140 ದೇಶಗಳ 4,000ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುತ್ತಿರುವ ಜಾಗತಿಕ ಸರಕಾರಿ ಸಮ್ಮೇಳನದ ಆರನೇ ಆವೃತಿಯಲ್ಲಿ ಭಾರತವು ಅತಿಥಿ ರಾಷ್ಟ್ರವಾಗಿ ಭಾಗವಹಿಸುತ್ತಿದೆ. “ಈ ಸಮ್ಮೇಳನಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದು ಕೇವಲ ನನಗೆ ಮಾತ್ರವಲ್ಲ ಭಾರತದ 125 ಕೋಟಿ ಜನರಿಗೆ ಹೆಮ್ಮೆಯ ವಿಷಯವಾಗಿದೆ” ಎಂದು ಮೋದಿ ತಿಳಿಸಿದರು.

ಯುಎಇಯು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿರುವ ಬಗ್ಗೆ ಶ್ಲಾಘನೆ ಮಾಡಿದ ಮೋದಿ, ಮರುಭೂಮಿಯನ್ನು ಜೀವನಯೋಗ್ಯ ಸ್ಥಳವನ್ನಾಗಿ ಬದಲಾಯಿಸಲಾಗಿದೆ. ಇದು ನಿಜವಾಗಿಯೂ ಚಮತ್ಕಾರ ಎಂದು ಹೇಳಿದರು.

ಭಾರತದ ಮಂಗಳ ಕಕ್ಷೀಯ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಮೋದಿ, ಭಾರತದಲ್ಲಿ ಟ್ಯಾಕ್ಸಿಯಲ್ಲಿ ಹೋಗಬೇಕಾದರೆ 10 ರೂ. ನೀಡಬೇಕು. ಆದರೆ ಭಾರತ ಮಂಗಳ ಗ್ರಹಕ್ಕೆ ತೆರಳಲು ಕಿ.ಮೀ. ಒಂದಕ್ಕೆ ತಗಲುವ ವೆಚ್ಚ ಕೇವಲ 7 ರೂ. ಎಂದು ಹೇಳಿದರು. ಭಾರತದ ಶೇ. 65 ಜನರು 35ರ ಹರೆಯಕ್ಕಿಂತ ಕೆಳಗಿನವರು. ಈ ಯುವಜನತೆಯ ಕೈಗೆ ತಂತ್ರಜ್ಞಾನವನ್ನು ನೀಡುವ ಮೂಲಕ ಹೊಸ ಭಾರತದ ಕನಸನ್ನು ನನಸುಗೊಳಿಸಬಹುದು ಎಂದು ಮೋದಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News