ಒಮನ್ ಭೇಟಿಯಿಂದ ಉಭಯ ದೇಶಗಳ ಬಾಂಧವ್ಯ ವೃದ್ಧಿ: ಪ್ರಧಾನಿ ಮೋದಿ

Update: 2018-02-12 16:59 GMT

ಮಸ್ಕತ್, ಫೆ. 12: ಒಮನ್ ಭೇಟಿ ಮತ್ತು ಆ ದೇಶದ ನಾಯಕರೊಂದಿಗೆ ತಾನು ನಡೆಸಿದ ಮಾತುಕತೆಗಳು ದ್ವಿಪಕ್ಷೀಯ ಸಂಬಂಧಗಳ ಎಲ್ಲಾ ಕ್ಷೇತ್ರಗಳಿಗೆ ‘ಮಹತ್ವದ ವೇಗೋತ್ಕರ್ಷ’ ನೀಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.

‘‘ಈ ಒಮನ್ ಭೇಟಿಯು ಯಾವತ್ತೂ ನನ್ನ ನೆನಪಿನಲ್ಲಿರುತ್ತದೆ’’ ಎಂದು ಎರಡು ದಿನಗಳ ಭೇಟಿಯ ಮುಕ್ತಾಯಕ್ಕೆ ಮುನ್ನ ಸೋಮವಾರ ಅವರು ಟ್ವೀಟ್ ಮಾಡಿದ್ದಾರೆ.

ಈ ಭೇಟಿಯ ವೇಳೆ ಭಾರತ ಮತ್ತು ಒಮನ್ ದೇಶಗಳು 8 ಒಪ್ಪಂದಗಳಿಗೆ ಸಹಿ ಹಾಕಿದವು.

‘‘ಎರಡು ದೇಶಗಳ ಉದ್ಯಮಶೀಲ ಜನರ ನಡುವಿನ ಶತಮಾನಗಳ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಈ ಭೇಟಿ ನೆರವು ನೀಡಿದೆ ಹಾಗೂ ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿನ ನಮ್ಮ ಬಾಂಧವ್ಯವಕ್ಕೆ ಮತ್ತಷ್ಟು ಇಂಬು ನೀಡಿದೆ’’ ಎಂದು ಮೋದಿ ಹೇಳಿದರು.

‘‘ಧನ್ಯವಾದಗಳು ಸುಲ್ತಾನ್ ಕಾಬೂಸ್ ಬಿನ್ ಸೈದ್ ಅಲ್ ಸೈದ್ ನಿಮ್ಮ ಹಾರ್ದಿಕ ಆತಿಥ್ಯ ಮತ್ತು ಸ್ನೇಹಕ್ಕಾಗಿ. ಇದರಿಂದಾಗಿ ನನ್ನ ಈ ಒಮನ್ ಭೇಟಿಯು ನನ್ನ ಅತ್ಯಂತ ಸ್ಮರಣಾರ್ಹ ಭೇಟಿಗಳ ಪೈಕಿ ಒಂದಾಗಿದೆ’’ ಎಂದು ಪ್ರಧಾನಿ ನುಡಿದರು.

ಇದಕ್ಕೂ ಮೊದಲು ಅವರು ಫೆಲೆಸ್ತೀನ್ ಮತ್ತು ಯುಎಇಗೆ ಭೇಟಿ ನೀಡಿದ್ದರು.

8 ಒಪ್ಪಂದಗಳಿಗೆ ಸಹಿ

ತನ್ನ ಮೂರು ದೇಶಗಳ ಪ್ರವಾಸದ ಕೊನೆಯ ಹಂತವಾಗಿ ದುಬೈಯಿಂದ ಮಸ್ಕತ್‌ಗೆ ಆಗಮಿಸಿದ ಪ್ರಧಾನಿ ಮೋದಿ, ರವಿವಾರ ರಾತ್ರಿ ಒಮನ್ ದೊರೆ ಸುಲ್ತಾನ್ ಕಾಬೂಸ್ ಜೊತೆ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.

ಉಭಯ ದೇಶಗಳ ನಡುವಿನ ಹಾಲಿ ಸಹಕಾರದ ಬಗ್ಗೆ ಹಾಗೂ ಸಂಬಂಧಗಳನ್ನು ಇನ್ನಷ್ಟು ಬೆಳೆಸುವ ವಿಧಾನಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು ಎಂದು ಅಧಿಕೃತ ‘ಒಮನ್ ನ್ಯೂಸ್ ಏಜನ್ಸಿ’ ವರದಿ ಮಾಡಿದೆ.

‘‘ಸುಲ್ತಾನ್ ಕಾಬೂಸ್ ಜೊತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಿಯೋಗವು ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಮಾತುಕತೆ ನಡೆಸಿತು. ವ್ಯಾಪಾರ ಮತ್ತು ಹೂಡಿಕೆ, ಇಂಧನ, ರಕ್ಷಣೆ ಮತ್ತು ಭದ್ರತೆ, ಆಹಾರ ಭದ್ರತೆ ಮತ್ತು ಪ್ರಾದೇಶಿಕ ವಿಷಯಗಳಲ್ಲಿನ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಮಾತುಕತೆಯಲ್ಲಿ ಒತ್ತು ನೀಡಲಾಯಿತು’’ ಎಂದು ಭಾರತೀಯ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಮಾತುಕತೆಗಳ ಬಳಿಕ ಉಭಯ ದೇಶಗಳು 8 ಒಪ್ಪಂದಗಳಿಗೆ ಸಹಿ ಹಾಕಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News