ಮರಳು ಬಿರುಗಾಳಿ: ರಿಯಾದ್‌ನ ಶಾಲೆಗಳು ಬಂದ್

Update: 2018-02-14 16:56 GMT

ರಿಯಾದ್, ಫೆ. 14: ಸೌದಿ ಅರೇಬಿಯದಾದ್ಯಂತ ಬೀಸುತ್ತಿರುವ ಮರಳು ಬಿರುಗಾಳಿಯ ಹಿನ್ನೆಲೆಯಲ್ಲಿ, ರಾಜಧಾನಿ ರಿಯಾದ್‌ನಲ್ಲಿರುವ ಎಲ್ಲ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳನ್ನು ಬುಧವಾರ ಮುಚ್ಚಲಾಗಿದೆ ಎಂದು ರಿಯಾದ್ ಶಿಕ್ಷಣ ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತರಿಪಡಿಸುವ ದೃಷ್ಟಿಯಿಂದ ಸೌದಿ ಹವಾಮಾನ ಇಲಾಖೆ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಬಿರುಗಾಳಿಯು ಇನ್ನೂ ಹಲವು ದಿನಗಳು ಮುಂದುವರಿಯುವ ಸಾಧ್ಯತೆಯಿದೆ ಹಾಗೂ ದಕ್ಷಿಣದಿಂದ ಬೀಸುವ ಮರಳು ಬಿರುಗಾಳಿಯು ಗಂಟೆಗೆ 55 ಕಿ.ಮೀ. ವೇಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಮಾನ ಹೆದ್ದಾರಿಯಲ್ಲಿ ಭೂಸ್ಪರ್ಶ ಮಾಡಿಲ್ಲ: ಸೌದಿ ಅಧಿಕಾರಿಗಳ ಸ್ಪಷ್ಟನೆ

ಮರಳು ಬಿರುಗಾಳಿಯಿಂದಾಗಿ ವಿಮಾನವೊಂದು ನಿಬಿಡ ಹೆದ್ದಾರಿಯೊಂದರಲ್ಲಿ ಭೂಸ್ಪರ್ಶ ಮಾಡಿದೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ಊಹಾಪೋಹಗಳನ್ನು ಸೌದಿ ಅರೇಬಿಯದ ಅಧಿಕಾರಿಗಳು ನಿರಾಕರಿಸಿದ್ದಾರೆ.

ಜಿದ್ದಾದಲ್ಲಿ ಪ್ರಬಲ ಮರಳು ಬಿರುಗಾಳಿಯ ನಡುವೆಯೇ, ಪಕ್ಕದಲ್ಲಿ ವಾಹನಗಳು ಓಡಾಡುತ್ತಿರುವಾಗ ವಿಮಾನವೊಂದು ಹಾರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಜಿದ್ದಾ-ಮಕ್ಕಾ ಹೆದ್ದಾರಿಯಲ್ಲಿ ವಿಮಾನ ಭೂಸ್ಪರ್ಶ ಮಾಡಿದೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಆರೋಪಿಸಿದ್ದಾರೆ.

ಆದರೆ, ಇದು 2015 ಸೆಪ್ಟಂಬರ್‌ನಲ್ಲಿ ಮರಳು ಬಿರುಗಾಳಿ ಬೀಸುತ್ತಿರುವಾಗ ಜಿದ್ದಾದ ಕಿಂಗ್ ಅಬ್ದುಲಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೆಗೆಯಲಾದ ವೀಡಿಯೊ ಆಗಿತ್ತು ಹಾಗೂ ವಿಮಾನದ ಪಕ್ಕದಲ್ಲಿ ಕಾಣಿಸಿಕೊಂಡಿರುವ ಕಾರುಗಳು ವಿಮಾನ ನಿಲ್ದಾಣದ ಕಾರ್ಯನಿರ್ವಾಹಕ ಕಚೇರಿಗೆ ಸೇರಿದವುಗಳು ಎಂದು ಸೌದಿ ನಾಗರಿಕ ವಾಯುಯಾನ ಪ್ರಾಧಿಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News