ಸೌದಿ: ಇನ್ನು ಮುಂದೆ ಮಹಿಳೆಯರು ಉದ್ಯಮ ಆರಂಭಿಸಲು ಪತಿ, ಪುರುಷರ ಅನುಮತಿ ಬೇಕಿಲ್ಲ

Update: 2018-02-18 17:15 GMT

ಜಿದ್ದಾ (ಸೌದಿ ಅರೇಬಿಯ), ಫೆ. 18: ಇನ್ನು ಮುಂದೆ ಸೌದಿ ಅರೇಬಿಯದ ಮಹಿಳೆಯರು ಸ್ವಂತ ಉದ್ಯಮ ಆರಂಭಿಸುವುದಾದರೆ ಅವರು ಪುರುಷ ರಕ್ಷಕನ ಅನುಮತಿ ಪಡೆಯಬೇಕಾಗಿಲ್ಲ ಎಂದು ವಾಣಿಜ್ಯ ಮತ್ತು ಹೂಡಿಕೆ ಸಚಿವಾಲಯ ಹೇಳಿದೆ.

‘‘ಪುರುಷ ರಕ್ಷಕನ ಅನುಮತಿಯ ಅಗತ್ಯವಿಲ್ಲ. ಸೌದಿ ಮಹಿಳೆಯರು ಸ್ವಂತ ಉದ್ಯಮವನ್ನು ಮುಕ್ತವಾಗಿ ಆರಂಭಿಸಬಹುದಾಗಿದೆ’’ ಎಂದು ಸಚಿವಾಲಯದ ವಕ್ತಾರ ಅಬ್ದುಲ್ ರಹಮಾನ್ ಅಲ್-ಹುಸೈನ್ ಗುರುವಾರ ‘ನೋ ನೀಡ್’ ಎಂಬ ಹ್ಯಾಶ್‌ಟ್ಯಾಗ್ (ವಿಷಯ)ನಲ್ಲಿ ಟ್ವೀಟ್ ಮಾಡಿದ್ದಾರೆ.

ನೂತನ ನಿಯಮಗಳ ಪ್ರಕಾರ, ಕಂಪೆನಿಯೊಂದನ್ನು ಆರಂಭಿಸಲು ನೋಟರಿಯ ಬಳಿಗೆ ಹೋಗಬೇಕಾಗಿಲ್ಲ. ಈ ಎಲ್ಲ ಪ್ರಕ್ರಿಯೆಗಳನ್ನು ಇಲೆಕ್ಟ್ರಾನಿಕ್ ವಿಧಾನದಿಂದ ಮಾಡಬಹುದಾಗಿದೆ.

ಇನ್ನು ಸೌದಿ ಮಹಿಳೆಯರು ಸ್ವಂತ ಉದ್ಯಮವನ್ನು ಆರಂಭಿಸಲು ಪುರುಷರಿಗಿಂತ ಹೆಚ್ಚಿನ ಅಡೆತಡೆಗಳನ್ನು ಎದುರಿಸಬೇಕಾಗಿಲ್ಲ ಹಾಗೂ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸರಕಾರಿ ಅಧಿಕಾರಿಗಳಿಗೆ ಪುರುಷ ರಕ್ಷಕನ ಅನುಮತಿ ಬೇಕಾಗಿಲ್ಲ.

ಸರಕಾರದ ಒಟ್ಟಾರೆ ಅಭಿವೃದ್ಧಿ ಅಭಿಯಾನದ ಭಾಗವಾಗಿ, ಸೌದಿ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಈ ನೂತನ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಕುಟುಂಬ ವ್ಯವಹಾರಗಳು ಹಾಗೂ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಇಲಾಖೆಯ ಮುಖ್ಯಸ್ಥೆ ನುಜೂದ್ ಅಲ್-ಕಾಸಿಮ್ ಹೇಳಿದರು.

ಸೌದಿ ಅರೇಬಿಯದ ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ಉತ್ತೇಜಿಸುವುದು ಹಾಗೂ ಅವರಿಗೆ ಅವರ ಸಂಪೂರ್ಣ ಹಕ್ಕುಗಳನ್ನು ಹಾಗೂ ಶರಿಯಾ ನೀಡಿದ ಹಕ್ಕುಗಳನ್ನು ಕೊಡುವುದು ‘ಮುನ್ನೋಟ 2030’ರ ಉದ್ದೇಶಗಳ ಪೈಕಿ ಒಂದಾಗಿದೆ ಎಂದು ಕುಟುಂಬ ವ್ಯವಹಾರಗಳು ಹಾಗೂ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಇಲಾಖೆಯ ಮುಖ್ಯಸ್ಥೆ ನುಜೂದ್ ಅಲ್-ಕಾಸಿಮ್ ‘ಅರಬ್ ನ್ಯೂಸ್’ಗೆ ಹೇಳಿದರು.

‘‘ಈ ಕ್ರಮವು ಸೌದಿ ಸಮಾಜದಲ್ಲಿ ಮಹಿಳೆಯರಿಗೆ ಅವಕಾಶಗಳ ಬಾಗಿಲನ್ನು ತೆರೆಯುತ್ತದೆ ಹಾಗೂ ಅವರ ಪ್ರತಿಭೆಗಳು ಮತ್ತು ಕಲ್ಪನೆಗಳನ್ನು ಉದ್ಯಮದಲ್ಲಿ ಪರೀಕ್ಷಿಸಲು ಅವಕಾಶ ನೀಡುತ್ತದೆ ಎಂದು ನನಗನಿಸುತ್ತದೆ’’ ಎಂದು ಸೌದಿ ಕಾನೂನು ಸಲಹೆಗಾರ್ತಿ ದಿಮಾ ಅಲ್-ಶರೀಫ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News