×
Ad

'ಶೇಕ್ ಖಲೀಫಾ ಎಕ್ಸಲೆನ್ಸ್ ಅವಾರ್ಡ್ಸ್ 2018': ತುಂಬೆ ಗ್ರೂಪ್ ಗೆ ನಾಲ್ಕು ಪ್ರಶಸ್ತಿ

Update: 2018-02-21 21:44 IST

ದುಬೈ, ಫೆ.21: ದುಬೈ ಮೂಲದ ಜಾಗತಿಕ ಸಮೂಹ ಸಂಸ್ಥೆ ತುಂಬೆ ಗ್ರೂಪ್ ಪ್ರತಿಷ್ಠಿತ ಶೇಕ್ ಖಲೀಫಾ ಎಕ್ಸಲೆನ್ಸ್ ಅವಾರ್ಡ್ಸ್ 2018ರಲ್ಲಿ (ಎಸ್‌ಕೆಇಎ) ನಾಲ್ಕು ಪ್ರಶಸ್ತಿಗಳನ್ನು ಜಯಿಸುವ ಮೂಲಕ ಎಸ್‌ಕೆಇಎ ಇತಿಹಾಸದಲ್ಲೇ ಒಂದೇ ವರ್ಷದಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದ ಮೊಟ್ಟಮೊದಲ ಸಂಸ್ಥೆಯೆಂಬ ಖ್ಯಾತಿಗೆ ಒಳಗಾಗಿದೆ. ಅಬುಧಾಬಿಯ ರಾಜಕುಮಾರ ಮತ್ತು ಯುಎಇ ಸಶಸ್ತ್ರ ಪಡೆಗಳ ಸಹಾಯಕ ಸರ್ವೋಚ್ಚ ಕಮಾಂಡರ್ ಗೌರವಾನ್ವಿತ ಶೇಕ್ ಮುಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್ ಅವರ ನೇತೃತ್ವದಲ್ಲಿ ಅಬುಧಾಬಿಯ ಎಮಿರೇಟ್ಸ್ ಪ್ಯಾಲೇಸ್‌ನಲ್ಲಿ ಫೆಬ್ರವರಿ 21ರಂದು ನಡೆದ 16ನೇ ಶೇಕ್ ಖಲೀಫಾ ಎಕ್ಸಲೆನ್ಸ್ ಅವಾರ್ಡ್ಸ್ ಪ್ರದಾನ ಸಮಾರಂಭದಲ್ಲಿ ಅಬುಧಾಬಿ ರಾಜಕುಮಾರರ ನ್ಯಾಯಾಲಯದ ಮುಖ್ಯಸ್ಥರಾದ ಎಚ್.ಎಚ್ ಶೇಕ್ ಹಮೀದ್ ಬಿನ್ ಝಯೇದ್ ಅಲ್ ನಹ್ಯಾನ್ ಅವರು ತುಂಬೆ ಗ್ರೂಪ್‌ನ ಸಂಸ್ಥಾಪಕರಾದ ಡಾ. ತುಂಬೆ ಮೊಯಿದೀನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ತುಂಬೆ ಸಮೂಹಕ್ಕೆ ಸೇರಿದ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯ ಚಿನ್ನದ ಪ್ರಶಸ್ತಿ ಜಯಿಸಿದ್ದರೆ, ದುಬೈ ತುಂಬೆ ಆಸ್ಪತ್ರೆ, ಅಜ್ಮಾನ್ ತುಂಬೆ ಆಸ್ಪತ್ರೆ ಮತ್ತು ಫುಜೈರಾ ತುಂಬೆ ಆಸ್ಪತ್ರೆ ಬೆಳ್ಳಿ ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ಪ್ರತಿಷ್ಠಿತ ಎಸ್‌ಕೆಇಎ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಸಂಸ್ಥೆ ನಾಲ್ಕು ಪ್ರಶಸ್ತಿಗಳನ್ನು ಜಯಿಸಿರುವುದು ಖುಷಿ ನೀಡಿದೆ. ನಮ್ಮ ಪರಿಶ್ರಮ ಮತ್ತು ಬದ್ಧತೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ ಎಸ್‌ಕೆಇಎಯ ತೀರ್ಪುಗಾರರ ಮಂಡಳಿಗೆ ನಾನು ಕೃತಜ್ಞನಾಗಿದ್ದೇನೆ. ಇದೇ ವೇಳೆ ನಾನು ನಮ್ಮ ಗ್ರಾಹಕರಿಗೂ ಕೃತಜ್ಞತೆ ಸೂಚಿಸುತ್ತೇನೆ ಮತ್ತು ನಮ್ಮ ಸಿಬ್ಬಂದಿಗೆ ಶುಭಾಶಯ ಕೋರುತ್ತೇನೆ ಎಂದು ಡಾ. ತುಂಬೆ ಮೊಯಿದೀನ್ ತಿಳಿಸಿದ್ದಾರೆ.

ಪ್ರಶಸ್ತಿ ಗೆದ್ದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ತುಂಬೆ ಗ್ರೂಪ್‌ನ ಆರೋಗ್ಯಸೇವೆ ವಿಭಾಗದ ಉಪಾಧ್ಯಕ್ಷರಾದ ಅಕ್ಬರ್ ಮೊಯಿದೀನ್, ನಾಲ್ಕು ಪ್ರಶಸ್ತಿಗಳು ಬಂದಿರುವುದು ನಮ್ಮ ಆರೋಗ್ಯಸೇವೆಗೆ ಸಿಕ್ಕ ಗೌರವ ಮಾತ್ರವಲ್ಲ ತುಂಬೆ ಆಸ್ಪತ್ರೆಗಳಲ್ಲಿ ರೋಗಿಗಳು ಪಡೆಯುತ್ತಿರುವ ಅತ್ಯುನ್ನತ ಗುಣಮಟ್ಟದ ಸೇವೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ವ್ಯವಹಾರ ಪದ್ಧತಿಯನ್ನು ಅನುಸರಿಸುವ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಪ್ರತಿ ವರ್ಷ ಎಸ್‌ಕೆಇಎ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News