ಪುತ್ರಿಯರ ಮದುವೆಗೆ ಹಣ ಹೊಂದಿಸುವ ಹೋರಾಟ

Update: 2018-02-21 17:30 GMT

ರಿಯಾದ್, ಫೆ. 21: ನಾಲ್ಕು ಹೆಣ್ಣು ಮಕ್ಕಳ ಮದುವೆ ಮತ್ತು ವರದಕ್ಷಿಣೆ ಖರ್ಚಿಗಾಗಿ ಹಣ ಸಂಪಾದಿಸಲು 25 ವರ್ಷಗಳ ಹಿಂದೆ ಬೆಂಗಳೂರಿನಿಂದ ಸೌದಿ ಅರೇಬಿಯಕ್ಕೆ ದುಡಿಯಲು ಬಂದ ವ್ಯಕ್ತಿಯೊಬ್ಬರು ಒಂದೇ ಒಂದು ದಿನ ರಜೆ ಮಾಡಿಲ್ಲ ಹಾಗೂ ತನ್ನ ಕುಟುಂಬವನ್ನು ನೋಡಲು ಒಮ್ಮೆಯೂ ಊರಿಗೆ ಹಿಂದಿರುಗಿಲ್ಲ!

ಸೈಯದ್ ಸಯೀದ್ ಮೆಹಬೂಬ್ ಸಾಬ್ 1992ರಲ್ಲಿ ಸೌದಿ ಅರೇಬಿಯಕ್ಕೆ ಬಂದಾಗ ಅವರಿಗೆ 42 ವರ್ಷ. ಅವರ ಪತ್ನಿ ಮತ್ತು 4 ಪುತ್ರಿಯರು ಬೆಂಗಳೂರಿನಲ್ಲಿ ಇದ್ದಾರೆ.

 ಪುತ್ರಿಯರಿಗೆ ಉತ್ತಮ ಶಿಕ್ಷಣ ನೀಡಲು ಹಾಗೂ ಮದುವೆ ಮಾಡುವುದಕ್ಕಾಗಿ ಅವರು ರಾತ್ರಿ ಹಗಲು ದುಡಿದರು. ಪುತ್ರಿಯರ ಮದುವೆಗೆ ವರದಕ್ಷಿಣೆ ನೀಡಲು ಹಣ ಗಳಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು.

ಹಲವು ವರ್ಷಗಳ ಕಾಲ ಅವರು ಹಗಲಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ದಿನಗೂಲಿಗೆ ದುಡಿದರು ಹಾಗೂ ರಾತ್ರಿಯಲ್ಲಿ ಟೈಲರ್ ಕೆಲಸ ಮಾಡಿದರು.

ಈಗ 65 ವರ್ಷದವರಾಗಿರುವ ಸಾಬ್ ತನ್ನ ಮಕ್ಕಳ ಬಾಲ್ಯವನ್ನು ಆನಂದಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಅವರು ಊರು ಬಿಟ್ಟಾಗ ಅವರ ಚಿಕ್ಕ ಪುತ್ರಿಯರು ಚಿಕ್ಕ ಮಕ್ಕಳಾಗಿದ್ದರು. ಈಗ ಅವರು ಬೆಳೆದಿದ್ದು ಕೆಲಸ ಮಾಡುತ್ತಿದ್ದಾರೆ.

ಮಕ್ಕಳಿಗೆ ನನ್ನನ್ನು ನೋಡಿದ ನೆನಪಿಲ್ಲ

‘‘ನಾನು ಊರು ಬಿಟ್ಟಾಗ ನನ್ನ ಕೊನೆಯ ಮಗಳು ವಹೀದಾ ನಾಝ್‌ಗೆ 3 ವರ್ಷ. ದೇವರ ದಯೆಯಿಂದ ಈಗ ಅವಳಿಗೆ 28 ವರ್ಷ. ಅವಳು ಈಗ ಕೆಲಸ ಮಾಡುತ್ತಿದ್ದಾಳೆ’’ ಎಂದು ಮೆಹಬೂಬ್ ಸಾಬ್ ಹೇಳಿರುವುದಾಗಿ ‘ಸೌದಿ ಗಝೆಟ್’ ವರದಿ ಮಾಡಿದೆ.

‘‘ಅವಳಿಗೆ ನನ್ನನ್ನು ನೋಡಿದ ನೆನಪಿಲ್ಲ. ಫೋಟೊಗಳಲ್ಲಿ ಮಾತ್ರ ನೋಡಿದ್ದಳು. ಈಗ ವೀಡಿಯೊದಲ್ಲಿ ಮಾತನಾಡುವ ಅವಕಾಶವಿದೆ. ಅವಳು ಕಣ್ಣೀರು ಹಾಕುತ್ತಾ ಭಾರತಕ್ಕೆ ಮರಳುವಂತೆ ನನ್ನನ್ನು ಒತ್ತಾಯಿಸುತ್ತಾಳೆ. ತನ್ನ ಮದುವೆ ಮತ್ತು ವರದಕ್ಷಿಣೆ ಬಗ್ಗೆ ಚಿಂತಿಸಬೇಡ ಎಂದು ನನಗೆ ಹೇಳುತ್ತಾಳೆ. ಕೆಲಸ ಮಾಡುವ ಮಹಿಳೆಯಾಗಿ ತನ್ನ ಮದುವೆಯ ಖರ್ಚನ್ನು ನಿಭಾಯಿಸುವ ವಿಶ್ವಾಸ ಅವಳಿಗಿದೆ’’ ಎಂದು ಸಾಬ್ ಹೇಳುತ್ತಾರೆ.

ಮನೆಗೆ ಹಿಂದಿರುಗಲು ನಿರ್ಧಾರ

ತನ್ನ ಕಠಿಣ ಪರಿಶ್ರಮದ ಫಲವಾಗಿ ತನ್ನ ಕುಟುಂಬಕ್ಕೆ ಒಳ್ಳೆಯ ಬದುಕು ಹಾಗೂ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅವರಿಗೆ ಸಾಧ್ಯವಾಗಿದೆ. ಅವರ ಇಬ್ಬರು ಹಿರಿಯ ಪುತ್ರಿಯರಿಗೆ ಮದುವೆಯಾಗಿದೆ ಹಾಗೂ ಇನ್ನಿಬ್ಬರು ಕೆಲಸ ಮಾಡುತ್ತಿದ್ದಾರೆ.

ಅವರು ಭಾರತದಲ್ಲಿ ಈವರೆಗೆ ಸ್ವಂತ ಮನೆ ಕಟ್ಟಿಲ್ಲ. ಮನೆ ಕಟ್ಟುವುದಕ್ಕಿಂತ ಮಕ್ಕಳಿಗೆ ಶಿಕ್ಷಣ ನೀಡುವುದು ಮುಖ್ಯ ಎಂಬುದಾಗಿ ಅವರು ಭಾವಿಸಿದ್ದಾರೆ. ಈವರೆಗೆ ಅವರು ತನ್ನ ಪುತ್ರಿಯರ ಧ್ವನಿಗಳನ್ನು ಮಾತ್ರ ಕೇಳಿದ್ದಾರೆ ಹಾಗೂ ಅವರ ಚಿತ್ರಗಳನ್ನು ಮಾತ್ರ ನೋಡಿದ್ದಾರೆ. ಈಗ ಅವರ ಪುತ್ರಿಯರು ಮನೆಗೆ ಮರಳುವಂತೆ ತಂದೆಯನ್ನು ಒತ್ತಾಯಿಸುತ್ತಿದ್ದಾರೆ.

ಮಕ್ಕಳ ಒತ್ತಾಯಕ್ಕೆ ಮಣಿದಿರುವ ಅವರು 25 ವರ್ಷಗಳ ಬಳಿಕ ತನ್ನ ಕುಟುಂಬವನ್ನು ಸೇರಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರಿಗೆ ಸಮಾಜಸೇವಕ ನಾಸ್ ಶೌಕತ್ ಅಲಿ ವೊಕ್ಕಮ್ ನೆರವು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News