×
Ad

ಗಲ್ಫ್ ಕನ್ನಡಿಗ ಎನ್ನಾರೈಗಳ ಹಿತರಕ್ಷಣೆಗೆ ಕ್ರಮ: ಡಾ.ಆರತಿ ಕೃಷ್ಣನ್ ಭರವಸೆ

Update: 2018-02-26 15:05 IST

ರಿಯಾದ್, ಫೆ.28: ಗಲ್ಫ್ ಕನ್ನಡಿಗ ಎನ್ನಾರೈಗಳ ಹಿತರಕ್ಷಣೆಗಾಗಿ ಕರ್ನಾಟಕ ಸರಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಎನ್ನಾರೈ ಕನ್ನಡಿಗರಿಗಾಗಿ ಎನ್‌ಆರ್‌ಕೆ ಕಾರ್ಡ್‌ಗಳನ್ನು ಜಾರಿಗೊಳಿಸುವುದು ಮೊದಲ ಆದ್ಯತೆಯಾಗಿದೆ ಎಂದು ಕರ್ನಾಟಕ ಸರಕಾರದ ಎನ್ನಾರೈ ಫೋರಮ್‌ನ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣನ್ ಅವರು ಇಲ್ಲಿ ತಿಳಿಸಿದರು.

ಅವರು, ಕೆ.ಎನ್.ಆರ್.ಐ.ಫೋರಂ ಪೂರ್ವ ವಲಯವು ಏರ್ಪಡಿಸಿದ್ದ ಅದ್ದೂರಿ ಸನ್ಮಾನ ಸ್ವೀಕರಿಸಿ, ನಂತರ ಮಾತನಾಡಿದರು.

ಸರಕಾರವು ಈಗಾಗಲೇ ಅನಿವಾಸಿ ಕನ್ನಡಿಗರ ಶ್ರೇಯೋಭಿವೃದ್ದಿ ಕಾರ್ಯಗಳಿಗಾಗಿ ಪ್ರಸಕ್ತ ಬಜೆಟ್ ನಲ್ಲಿ ಮೊತ್ತವನ್ನು ಮೀಸಲಿಟ್ಟಿದ್ದು, ಮಾತ್ರವಲ್ಲದೆ  ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ  ಕಲ್ಯಾಣ ಕೇಂದ್ರಗಳನ್ನು ತೆರೆದಿದ್ದು, ಸೌದಿ ಉದ್ಯೋಗ ಬಿಕ್ಕಟ್ಟಿನಿಂದ ಹಿಂತಿರುಗುವವರಿಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬ  ಭರವಸೆಯನ್ನು  ಈ ಸಂದರ್ಭ ನೀಡಿದರು.

ಪೂರ್ವ ವಲಯ ಅನಿವಾಸಿ ಕನ್ನಡಿಗರ ಒಕ್ಕೂಟದ ಅಧ್ಯಕ್ಷರಾಗಿರುವ ಝಕರಿಯಾ ಮುಝೈನ್ ಅವರು ಮಾತನಾಡುತ್ತಾ,  ಡಾ. ಆರತಿ ಕೃಷ್ಣ ಅವರ ಸೌದಿ ಭೇಟಿಯನ್ನು ಶ್ಲಾಘಿಸಿದರಲ್ಲದೆ, ಪ್ರಸಕ್ತ ಉದ್ಯೊಗ ಸಮಸ್ಯೆಗೆ  ಆಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಕ್ಕೆ ಒತ್ತಡ ತರಲು ಸೌದಿಯಲ್ಲಿರುವ ಅನಿವಾಸಿ ಕನ್ಮಡಿಗರೆಲ್ಲ ಒಂದೇ ಸೂರಿನಡಿಯಲ್ಲಿ ಒಟ್ಟುಗೂಡುವುದು ಬಹಳ ಅನಿವಾರ್ಯ ಎಂದು ಅಬಿಪ್ರಾಯಪಟ್ಟರು.

ಸೌದಿಯಲ್ಲಿನ  ಪ್ರಸಕ್ತ ಉದ್ಯೋಗ ಬಿಕ್ಕಟ್ಟಿನ ಬಗ್ಗೆ ನೇರವಾಗಿ ತಿಳಿಯಲು ಸರಕಾರದ ಪ್ರತಿನಿಧಿಯಾಗಿ ಡಾ. ಆರತಿ ಕೃಷ್ಣ ಅವರ ಅಧಿಕೃತ ಭೇಟಿಯು ಅನಿವಾಸಿ ಕನ್ನಡಿಗರ ಮಟ್ಟಿಗೆ ಬಹಳ ಕುತೂಹಲ ಮೂಡಿಸಿತ್ತು.  ಅಲ್ ಖೋಬಾರ್ ನ ಪ್ರತಿಷ್ಟಿತ ಹೋಟೆಲ್ ಹೋಲಿಡೇ ಇನ್ ನಲ್ಲಿ  ನಡೆದ ಈ ಭವ್ಯ ಸಮಾರಂಭದಲ್ಲಿ ನಾಯಕರು,  ಉದ್ಯಮಿಗಳು ಹಾಗೂ ಅನಿವಾಸಿ ಕನ್ನಡಿಗ ಸಂಘಟನಾ ಪ್ರತಿನಿಧಿಗಳು  ಭಾಗವಹಿಸಿ, ಸರಕಾರದ ಅಧೀನದಲ್ಲಿರುವ ಅನಿವಾಸಿ ಕನ್ನಡಿಗರ ಫೋರಂನ  ಯೋಜನೆಗಳನ್ನು ಸ್ವಾಗತಿಸಿದರು.

ಪ್ರಸಕ್ತ ಬಿಕ್ಕಟ್ಟಿನಿಂದ ತವರಿಗೆ ಮರಳಿರುವ ಹಾಗೂ ಸೌದಿಯಲ್ಲಿ ಉಳಿದಿರುವ ಅನಿವಾಸಿ ಕನ್ನಡಿಗರು ಸುಧಾರಿಸಲು ಬೇಕಾದ ಮೂಲಭೂತ ಕ್ರಮಗಳು ಹಾಗೂ ಕರಡು ನೀತಿಯನ್ನು ರಚಿಸಲು ಅನಿವಾಸಿಗಳೆಲ್ಲರಿಂದ ಮಾಹಿತಿ ಪಡೆದು ಕ್ರೋಢೀಕರಿಸಿದ  ನಿವೇದನೆಯನ್ನು, ಪೂರ್ವ ವಲಯ ಅನಿವಾಸಿ ಕನ್ನಡಿಗರ ಫೋರಂನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸರಕಾರಕ್ಕೆ ಸಲ್ಲಿಸಿದರು. ತದನಂತರ  ಆಯ್ದ  ಜಿಲ್ಲಾ ಮಟ್ಟದ ಸಂಘಟನಾ ಪ್ರತಿನಿಧಿಗಳು ತಮ್ಮ ಸೇವಾ ಚಟುವಟಿಕೆಗಳನ್ನು ಹಾಗೂ ತವರಿಗೆ ನೀಡುವ ಕೊಡುಗೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಆತಿಥ್ಯವನ್ನು ಸ್ವೀಕರಿಸಿ  ಸೌದಿ ಅರೇಬಿಯಾಕ್ಕೆ ಬಂದಿರುವ ಡಾ. ಆರತಿ ಕೃಷ್ಣ ಅವರನ್ನು  ಸನ್ಮಾನಿಸಲಾಯಿತು.  ಜೋಯ್ ಫೆರ್ನಾಂಡಿಸ್,  ಮಾದವ ಅಮೀನ್ ಹಾಗೂ ವಿಮೆನ್ ಫ್ರಾಟರ್ನಿಟಿ ಫಾರಂ ನ ಸದಸ್ಯೆಯರು  ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸೌದಿಯ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳಾದ  ಅಬ್ದುಲ್ ಲತೀಫ್ ಸಾಲೆ ಅಲ್ ನಈಮಿ, ಅಬ್ದುಲ್ ಖಾಲಿಕ್ ಅಲ್ ಖಾಸಿಮಿ, ಸಾದಿಕ್ ಅಬ್ದುಲ್ಲಾ ಅಲ್ ಅಬಾಸಿ, ಪೂರ್ವ ವಲಯ ಅನಿವಾಸಿ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಝಕರಿಯಾ ಮುಝೈನ್, ಉಪಾಧ್ಯಕ್ಷ  ಮಾಧವ್ ಅಮೀನ್ ಹಾಗೂ ಜೋಯ್ ಫೆರ್ನಾಂಡಿಸ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್, ಖಜಾಂಚಿ ಶೇಖ್ ಎಕ್ಸಪರ್ಟೈಸ್, ಕಾರ್ಯದರ್ಶಿಗಳಾದ ಖಮಾರುದ್ದೀನ್ ಹಾಗೂ ಸಲಾಹುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಝಕರಿಯಾ ಅವರು  ಸ್ವಾಗತಿಸಿ, ಸೌದಿ ಅರೇಬಿಯಾದಲ್ಲಿನ ಅನಿವಾಸಿ ಕನ್ನಡಿಗರ ಬಗ್ಗೆ ಸಂಕ್ಷಿಪ್ತ ನಿರೂಪಣೆಯನ್ನು ಒಕ್ಕೂಟದ  ಸದಸ್ಯ ಮುಹಮ್ಮದ್ ಫಿರೋಝ್  ನೀಡಿದರು. ಅನಿವಾಸಿ ಕನ್ನಡಿಗರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಅವರು ವಂದಿಸಿದರು. ಒಕ್ಕೂಟದ  ಸದಸ್ಯರಾದ ಎ.ಎಮ್. ಆರಿಫ್ ಜೋಕಟ್ಟೆ ಹಾಗೂ ಮುಹಮ್ಮದ್ ಇಕ್ಬಾಲ್  ಕಾರ್ಯಕ್ರಮವನ್ನು  ನಿರೂಪಿಸಿದರು.

ಈ ಸಮಾರಂಭದ ಪ್ರಾಯೋಜಕತ್ವವನ್ನು  ಎಕ್ಸ್ಪರ್ಟೈಸ್, ರಿಯಲ್ ಟೆಕ್, ಅಲ್- ಮುಝೈನ್, ಸಾದ್ ಅಲ್  ಗಹತಾನಿ , ಅಲ್-ಮನಾಫಾ ಟ್ರಾನ್ಸ್ಪೋರ್ಟ್ ಹಾಗೂ ಮಾಧವ್ ಅಮೀನ್ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News