ಸೌದಿ: ಸೇನಾ ಮುಖ್ಯಸ್ಥ ವಜಾ
ರಿಯಾದ್ (ಸೌದಿ ಅರೇಬಿಯ), ಫೆ. 27: ಸೌದಿ ಅರೇಬಿಯದ ಸೇನೆಯಲ್ಲಿ ಮಹತ್ವದ ಬದಲಾವಣೆ ಮಾಡಿರುವ ದೊರೆ ಸಲ್ಮಾನ್, ಸೇನಾ ಮುಖ್ಯಸ್ಥ ಜನರಲ್ ಅಬ್ದುಲ್ ರಹಮಾನ್ ಬಿನ್ ಸಾಲಿಹ್ ಅಲ್-ಬುನ್ಯನ್ ಹಾಗೂ ಇತರ ಹಲವಾರು ಉನ್ನತ ಸೇನಾಧಿಕಾರಿಗಳನ್ನು ವಜಾಗೊಳಿಸಿದ್ದಾರೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ.
ಸೋಮವಾರ ತಡ ರಾತ್ರಿ ಸರಣಿ ಆದೇಶಗಳನ್ನು ಹೊರಡಿಸಿದ ದೊರೆ, ಭೂ ಸೇನಾ ಪಡೆಗಳು ಮತ್ತು ವಾಯು ಪಡೆಗಳ ಹಲವಾರು ಮುಖ್ಯಸ್ಥರು ಹಾಗೂ ಆಂತರಿಕ ಸಚಿವಾಲಯದ ಹಿರಿಯ ಅಧಿಕಾರಿಗಳನ್ನೂ ವಜಾಗೊಳಿಸಿದ್ದಾರೆ.
ಈ ಪ್ರಮುಖ ಬದಲಾವಣೆಗೆ ಯಾವುದೇ ಅಧಿಕೃತ ಕಾರಣವನ್ನು ನೀಡಲಾಗಿಲ್ಲ. ಆದರೆ, ಯಮನ್‌ನಲ್ಲಿ ಹೌದಿ ಬಂಡುಕೋರರ ವಿರುದ್ಧ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಗಳ ಸೇನಾ ಕಾರ್ಯಾಚರಣೆಗೆ ಮೂರು ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಈ ಬೆಳವಣಿಗೆ ನಡೆದಿರುವುದು ಗಮನಾರ್ಹವಾಗಿದೆ.
‘‘ಜನರಲ್ ಅಬ್ದುಲ್ ರಹಮಾನ್ ಬಿನ್ ಸಾಲಿಹ್ ಅಲ್-ಬುನ್ಯನ್‌ರ ಸೇವೆಯನ್ನು ಕೊನೆಗೊಳಿಸಲಾಗಿದೆ’’ ಎಂದು ಸೌದಿ ಪ್ರೆಸ್ ಏಜನ್ಸಿ ಹೇಳಿದೆ. ನೂತನ ಸೇನಾ ಮುಖ್ಯಸ್ಥರಾಗಿ ಫಯ್ಯದ್ ಅಲ್-ರುವೈಲಿಯನ್ನು ನೇಮಿಸಲಾಗಿದೆ ಎಂದಿದೆ.
ಪಟ್ಟದ ಯುವರಾಜ ಹಾಗೂ ದೊರೆ ಸಲ್ಮಾನ್‌ರ ಮಗ ಮುಹಮ್ಮದ್ ಬಿನ್ ಸಲ್ಮಾನ್ ದೇಶದ ರಕ್ಷಣಾ ಸಚಿವರಾಗಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಅವರು ಸರಕಾರದ ಮೇಲಿನ ತನ್ನ ಹಿಡಿತವನ್ನು ಬಲಪಡಿಸುತ್ತಿದ್ದಾರೆ.