‘ಕಾರ್ನಿಶ್ ಅಲ್ ಕವಾಸಿಮ್’ ರಸ್ತೆಯ ವೇಗ ಮಿತಿ 50 ಕಿ.ಮೀ.ಗೆ ಇಳಿಕೆ
ರಾಸ್ ಅಲ್ ಖೈಮಾ (ಯುಎಇ), ಮಾ. 1: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಏಳು ಎಮಿರೇಟ್‌ಗಳಲ್ಲಿ ಒಂದಾಗಿರುವ ರಾಸ್ ಅಲ್ ಖೈಮಾದ ‘ಕಾರ್ನಿಶ್ ಅಲ್ ಕವಾಸಿಮ್’ ರಸ್ತೆಯ ವೇಗ ಮಿತಿಯನ್ನು ಪೊಲೀಸರು ಗಂಟೆಗೆ 60 ಕಿ.ಮೀ.ನಿಂದ 50 ಕಿ.ಮೀ.ಗೆ ತಗ್ಗಿಸಿದ್ದಾರೆ.
ಆದಾಗ್ಯೂ, ವೇಗ ಮಿತಿಯಲ್ಲಿ ಗಂಟೆಗೆ 20 ಕಿ.ಮೀ. ಹೊಂದಾಣಿಕೆ ವೇಗವನ್ನು ಕೊಟ್ಟು ವೇಗ ಪತ್ತೆಹಚ್ಚುವ ರಾಡಾರ್‌ನ್ನು ಗಂಟೆಗೆ 71 ಕಿ.ಮೀ.ಗೆ ನಿಗದಿಪಡಿಸಲಾಗಿದೆ ಎಂದು ರಾಸ್ ಅಲ್ ಖೈಮಾ ಪೊಲೀಸ್‌ನ ಸಾರಿಗೆ ಮತ್ತು ಗಸ್ತು ಇಲಾಖೆಯ ಉಸ್ತುವಾರಿ ನಿರ್ದೇಶಕ ಕರ್ನಲ್ ಅಹ್ಮದ್ ಸಯೀದ್ ಅಲ್ ಸಾಮ್ ಅಲ್ ನಕ್ಬಿ ತಿಳಿಸಿದರು.
‘‘ಮುಖ್ಯವಾಗಿ ವೇಗ ಮತ್ತು ನಿರ್ಲಕ್ಷ ಚಾಲನೆ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗಳನ್ನು ನಿಭಾಯಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದರು.
ವೇಗ ಮಿತಿಯಲ್ಲಿನ ಇಳಿಕೆಯ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿರುವ ಎಲ್ಲ ರಾಡಾರ್‌ಗಳನ್ನು ಪರಿಷ್ಕರಿಸಲಾಗಿದೆ.
‘‘ಈಗ ಎಲ್ಲ ಘನ ಟ್ರಕ್‌ಗಳು ಇಡೀ ದಿನ ಈ ರಸ್ತೆಯಲ್ಲಿ ಸಂಚರಿಸಬಹುದಾಗಿದೆ. ಮೊದಲು, ಬೆಳಗ್ಗೆ 6 ಗಂಟೆಯಿಂದ 8.30 ಹಾಗೂ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆವರೆಗೆ ಘನ ಟ್ರಕ್‌ಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು’’ ಎಂದು ನಕ್ಬಿ ಹೇಳಿದರು.