ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ವಾರ್ಷಿಕ ಕ್ರೀಡೋತ್ಸವ 2018 ಪ್ರಶಸ್ತಿ ವಿತರಣೆ

Update: 2018-03-07 18:24 GMT

ಅಜ್ಮನ್, ಮಾ.7: ಪ್ರಾದೇಶಿಕವಾಗಿ ಅತ್ಯಂತ ದೊಡ್ಡ ಅಂತರ್ ವಿಶ್ವವಿದ್ಯಾನಿಲಯ ಕ್ರೀಡೋತ್ಸವ ಎಂದು ಪರಿಗಣಿಸಲಾಗುವ ಅಜ್ಮನ್ ಗಲ್ಫ್ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ 17ನೇ ವಾರ್ಷಿಕ ಕ್ರೀಡೋತ್ಸವವು ಮಾರ್ಚ್ ಒಂದರಂದು ವೈವಿಧ್ಯಮಯ ಸಮಾರೋಪ ಸಮಾರಂಭದೊಂದಿಗೆ ಕೊನೆಯಾಯಿತು. ಫೆಬ್ರವರಿ 24ರಂದು ಆರಂಭವಾಗಿ ನಾಲ್ಕು ದಿನಗಳ ಕಾಲ ನಡೆದ ಕ್ರೀಡೋತ್ಸವವು 24 ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ಕ್ರೀಡಾಪಟುಗಳನ್ನು ಒಟ್ಟುಗೂಡಿಸಿತು.

ಈ ಕ್ರೀಡಾಪಟುಗಳು ಹತ್ತು ವಿಭಾಗಗಳಲ್ಲಿ 226 ಸ್ಪರ್ಧೆಗಳಲ್ಲಿ ಸ್ಪರ್ಧಿಸಿದರು. ಅಜ್ಮನ್‌ನ ಜಿಎಂಯು ಆವರಣದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಜಿಎಂಯುನ ಕುಲಪತಿ ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಯಾದ ಪ್ರೊ. ಹೊಸಮ್ ಹಮ್ದಿ ನೆರವೇರಿಸಿದರು. ಈ ವೇಳೆ ಉಪಾಧ್ಯಕ್ಷರು, ಜಿಎಂಯು ಕಾಲೇಜುಗಳ ಡೀನ್‌ಗಳು, ಕ್ರೀಡಾ ನಿರ್ದೇಶಕರು ಮತ್ತು ಸ್ಪರ್ಧಿಸುತ್ತಿರುವ ಶಿಕ್ಷಣ ಸಂಸ್ಥೆಗಳ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಮುಖ್ಯ ಅತಿಥಿಗಳು ಗೆಲುವು ಸಾಧಿಸಿದ ಕ್ರೀಡಾಳುಗಳಿಗೆ 40ಕ್ಕೂ ಅಧಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ಪ್ರಸಕ್ತ ವರ್ಷದಲ್ಲಿ ಫುಟ್ಬಾಲ್, ಕ್ರಿಕೆಟ್, ಬಾಸ್ಕೆಟ್ ಬಾಲ್, ಟೇಬಲ್ ಟೆನಿಸ್, ಟೆನಿಸ್, ಬ್ಯಾಡ್ಮಿಂಟನ್, ಥ್ರೋಬಾಲ್, ಸ್ಕ್ವಾಶ್ ಹಾಗೂ ಈಜು ಮುಂತಾದ ಕ್ರೀಡೆಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಈ ಅಭೂತಪೂರ್ವ ಕ್ರೀಡೋತ್ಸವವನ್ನು ಜಿಎಂಯುನ ಆರೋಗ್ಯಪೂರ್ಣ ಮನಸ್ಸಿಗಾಗಿ ಆರೋಗ್ಯಪೂರ್ಣ ದೇಹ ಎಂಬ ಆದರ್ಶದಂತೆ ನಡೆಸಲಾಗಿದೆ. ಆಮೂಲಕ ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ ಮತ್ತು ಆರೋಗ್ಯಪೂರ್ಣ ಸ್ಪರ್ಧೆಯನ್ನು ಮೂಡಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದು ವಿದ್ಯಾರ್ಥಿ ವ್ಯವಹಾರಗಳ ಡೀನ್ ಹಾಗೂ ಜಿಎಂಯುನ ಕ್ರೀಡಾ ಸಮಿತಿಯ ಮುಖ್ಯಸ್ಥರಾಗಿರುವ ಜೋಶುವಾ ಅಶೋಕ್ ತಿಳಿಸಿದರು.

ವಾರ್ಷಿಕ ಕ್ರೀಡೆಗೆ ನಿರಂತರವಾಗಿ ನೀಡುತ್ತಿರುವ ಪ್ರೋತ್ಸಾಹಕ್ಕಾಗಿ ಅವರು ಜಿಎಂಯು ಸಂಸ್ಥಾಪಕ ಮತ್ತು ಆಡಳಿತ ಮಂಡಳಿಯ ಮುಖ್ಯಸ್ಥ ಡಾ. ತುಂಬೆ ಮೊಯಿದೀನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ವರ್ಷಕ್ಕಿಂತ ವರ್ಷಕ್ಕೆ ಜಿಎಂಯು ವಾರ್ಷಿಕ ಕ್ರೀಡೋತ್ಸವ ಹೆಚ್ಚುಹೆಚ್ಚು ಜನಪ್ರಿಯ ಮತ್ತು ವಿಸ್ತಾರವಾಗುತ್ತಾ ಸಾಗುತ್ತಿದೆ. ಇದಕ್ಕಾಗಿ ಈ ಕ್ರೀಡೋತ್ಸವದಲ್ಲಿ ಭಾಗವಹಿಸುವ ಸಂಸ್ಥೆಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಅಶೋಕ್ ತಿಳಿಸಿದರು.

ಈ ಕ್ರೀಡೋತ್ಸವವನ್ನು ತುಂಬೆ ಗ್ರೂಪ್‌ನ ಆತಿಥ್ಯ ವಿಭಾಗದ ಪ್ರಶಸ್ತಿ ವಿಜೇತ ಹೆಲ್ತ್ ಕ್ಲಬ್‌ಗಳ ಜಾಲ, ಬಾಡಿ ಆ್ಯಂಡ್ ಸೋಲ್ ಹೆಲ್ತ್ ಕ್ಲಬ್ ಆ್ಯಂಡ್ ಸ್ಪಾ ಆಯೋಜಿಸಿ ನಿರೂಪಿಸಿದೆ. ಸಮಾರೋಪ ಸಮಾರಂಭವು ರುಚಿಕರವಾದ ಭೋಜನದೊಂದಿಗೆ ಕೊನೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News