ಕತಾರ್ ಇಂಡಿಯನ್ ಸೋಶಿಯಲ್ ಫೋರಂನಿಂದ ಕ್ರೀಡಾಕೂಟ

Update: 2018-03-21 08:31 GMT

ಕತಾರ್,ಮಾ.21:ಕತಾರ್ ಸ್ಪೋರ್ಟ್ಸ್ ಡೇ ದಿನಾಚರಣೆಯ ಅಂಗವಾಗಿ, ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ಆಯೋಜಿಸಿದ್ದ 'ಸ್ಪೋರ್ಟ್ಸ್ ಮೀಟ್ - 2018' ಕ್ರೀಡಾಕೂಟವು ಫೆ.16 ರಂದು ಪ್ರಾರಂಭವಾಗಿ ಮಾ.16 ರಂದು ಅಲ್ ಜಝೀರ ಅಕಾಡೆಮಿಯಲ್ಲಿ ವಿವಿಧ ಕ್ರೀಡೆ ಮತ್ತು ಸ್ಪರ್ಧೆಗಳೊಂದಿಗೆ ಅಂತಿಮವಾಗಿ ಮುಕ್ತಾಯಗೊಂಡಿತು.

ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ನ ರಾಜ್ಯ ಘಟಕಗಳಾದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಉತ್ತರ ರಾಜ್ಯಗಳ ಘಟಕವಾದ ದೆಹಲಿಯ ತಂಡಗಳು ಕಬಡ್ಡಿ, ವಾಲಿಬಾಲ್, ಹಗ್ಗ ಜಗ್ಗಾಟ, ಫುಟ್ಬಾಲ್, ರಿಲೇ ಓಟ, ಸ್ಯಾಕ್ ರೇಸ್ ಇನ್ನು ಮುಂತಾದ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದವು.

ವರ್ಣರಂಜಿತ ಪಥಸಂಚಲನದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮಕ್ಕೆ ದಫ್ ಮತ್ತು ಕೋಲು ಕುಣಿತವು ಮತ್ತಷ್ಟು ಆಕರ್ಷಣೆಯನ್ನು ನೀಡಿತ್ತು.

2022 ರಲ್ಲಿ ಕತಾರ್ ನಲ್ಲಿ ನಡೆಯಲಿರುವ ವಿಶ್ವ ಕಪ್ ಫುಟ್ಬಾಲ್ ಪಂದ್ಯಗಳಿಗೆ, ವಿವಿಧ ಪ್ಲೇಕಾರ್ಡ್ ಗಳನ್ನು ಪ್ರದರ್ಶಿಸುವುದರ ಮೂಲಕ ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ನ ಫುಟ್ಬಾಲ್ ತಂಡಗಳು ಬೆಂಬಲವನ್ನು ಸೂಚಿಸಿದವು.

ಕರ್ನಾಟಕ ರಾಜ್ಯದ ಮಂಗಳೂರು ತಂಡ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದು ಚಾಂಪಿಯನ್ ಕಿರೀಟವನ್ನು ತನ್ನದಾಗಿಸಿಕೊಂಡಿತು. 

ಕೇರಳದ ತ್ರಿಸ್ಸೂರ್ ತಂಡವು ಎರಡನೇ ಸ್ಥಾನ ಪಡೆದುಕೊಂಡರೆ ತಮಿಳುನಾಡು ತಂಡವು ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಕಬಡ್ಡಿ ಪಂದ್ಯಾವಳಿಯಲ್ಲಿ ಮಂಗಳೂರು ತಂಡದ ಅಬ್ದುಲ್ ವಾಹಿದ್ 'ಶ್ರೇಷ್ಠ ಕಬಡ್ಡಿ ಆಟಗಾರ' ಪ್ರಶಸ್ತಿಯನ್ನು ಪಡೆದರು.

ವಿವಿಧ ವೇಷ ಭೂಷಣಗಳನ್ನು ತೊಟ್ಟು ಪುಟಾಣಿ ಮತ್ತು ಕಿರಿಯ ಮಕ್ಕಳು ಕೂಡ ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದರು.

ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಂಡಿಯನ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಮೊಹಮ್ಮದ್ ಬುಖಾರಿ ರವರು ಕತಾರ್ ಇಂಡಿಯನ್ ಸೋಶಿಯಲ್ ಫೋರಂನ ಈ ಸ್ಪೋರ್ಟ್ಸ್ ಮೀಟ್ ಗೆ ಶ್ಲಾಘಿಸಿದರು ಮತ್ತು ವಿಜೇತರಿಗೆ ಬಹುಮಾನ ವಿತರಿಸಿದರು.

ಇಂಡಿಯನ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ನಿಲಾಂಗ್ಷು ದೇ ರವರು ಮಾತನಾಡಿ ಕ್ರೀಡೆಗೆ ಸಂಭಂದಪಟ್ಟ ಇಂತಹ ಯಾವುದೇ ಕಾರ್ಯಕ್ರಮವಾದರೂ ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ಗೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ಕತಾರ್ ಇಂಡಿಯನ್ ಫ್ರೆಟರ್ನಿಟಿ ಫೋರಮ್ ನ ಅಧ್ಯಕ್ಷರಾದ ಟಿ ವಿ ಅಬ್ದುಲ್ ರಝಾಕ್ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿಜೇತರಿಗೆ ಪದಕಗಳನ್ನು ವಿತರಿಸಿದರು.

ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ನ ಪ್ರಧಾನ ಕಾರ್ಯದರ್ಶಿ ಸಯೀದ್ ಕೊಮಚ್ಚಿ ಕಾರ್ಯಕ್ರಮವನ್ನು ನಿರೂಪಿಸಿದರು.

ಲತೀಫ್ ಮಡಿಕೇರಿ, ಇರ್ಷಾದ್ ಕುಳಾಯಿ, ಝಮೀರ್ ಹಳೆಯಂಗಡಿ, ಫಾರೂಕ್ ಮುಡಿಪು, ಸಲೀಂ ಬಂಗಾಡಿ, ಆರಿಫ್ ಅಕ್ಕರಂಗಡಿ, ಅಯ್ಯುಬ್ ಉಳ್ಳಾಲ, ಸಲೀಮ್ ಉಳ್ಳಾಲ, ಝಮೀರ್ ಎರ್ಮಲ್, ಇಬ್ರಾಹಿಂ ಯು.ಬಿ, ಜಲೀಲ್ ಕಲ್ಲಡ್ಕ, ಅಶ್ರಫ್ ಪುತ್ತೂರು, ಹ್ಯಾರಿಸ್ ಹಳೆಯಂಗಡಿ, ಇಸ್ಮಾಯಿಲ್ ಕಾಪು, ಇರ್ಫಾನ್ ಕಾಪು, ನಯಾಜ್ ತೋಡಾರ್, ನಯಾಜ್ ಮೈಸೂರು, ಸುಲೈಮಾನ್ ಮೈಸೂರು, ಬಷೀರ್ ಮಾಚಂಪಾಡಿ, ಫಾರೂಕ್ ಬೋಳಂತೂರು, ಸಯೀದ್ ಕಲೀಮ್ ಖಾದ್ರಿ, ಝಮೀರ್ ಕಾರ್ನಾಡ್ ಮತ್ತು ನಜಿರ್ ಪಾಶ ರವರು ಕಾರ್ಯಕ್ರಮದ ವಿವಿಧ ವಿಭಾಗಗಳ ನೇತೃತ್ವವನ್ನು ವಹಿಸಿದ್ದರು.

Writer - ವರದಿ : ಖಲಂದರ್ ಜಾಲ್ಸೂರ್ ​

contributor

Editor - ವರದಿ : ಖಲಂದರ್ ಜಾಲ್ಸೂರ್ ​

contributor

Similar News