ಸೌದಿ ಮೇಲಿನ ಕ್ಷಿಪಣಿ ದಾಳಿಯ ಹಿಂದೆ ಇರಾನ್: ಅರಬ್ ಮೈತ್ರಿಕೂಟ
ರಿಯಾದ್, ಮಾ. 27: ಯಮನ್‌ನಿಂದ ಹೌದಿ ಬಂಡುಕೋರರು ಉಡಾಯಿಸಿದ ಕ್ಷಿಪಣಿಗಳ ಅವಶೇಷಗಳು ಟೆಹರಾನ್ ಸಮೀಪ ಉತ್ಪಾದನೆಯಾದ ಅಸ್ತ್ರಗಳ ಲಕ್ಷಣಗಳನ್ನು ಹೊಂದಿವೆ ಎಂದು ಸೌದಿ ಅರೇಬಿಯ ನೇತೃತ್ವದ ಅರಬ್ ಮೈತ್ರಿಕೂಟ ಸೋಮವಾರ ಹೇಳಿದೆ.
ಹೌದಿ ಬಂಡುಕೋರರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಒದಗಿಸಿರುವುದಕ್ಕಾಗಿ ಮೈತ್ರಿಕೂಟವು ಇರಾನ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಸೋಮವಾರ ರಾತ್ರಿ ಇಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಸೌದಿ ನೇತೃತ್ವದ ಸೇನಾ ಮೈತ್ರಿಕೂಟದ ವಕ್ತಾರ ಕರ್ನಲ್ ತುರ್ಕಿ ಅಲ್ ಮಾಲಿಕಿ, ರಿಯಾದ್‌ನತ್ತ ಹಾರಿಸಲಾದ ಹೌದಿ ಕ್ಷಿಪಣಿಗಳ ಅವಶೇಷಗಳನ್ನು ಪ್ರದರ್ಶಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೈತ್ರಿಕೂಟದ ದೇಶಗಳ ರಾಯಭಾರಿಗಳು ಮತ್ತು ಸೇನಾ ಮಿತ್ರಕೂಟದ ಸದಸ್ಯರು ಉಪಸ್ಥಿತರಿದ್ದರು.
ಕ್ಷಿಪಣಿಗಳ ಅವಶೇಷಗಳ ವಿಧಿವಿಜ್ಞಾನ ಪರೀಕ್ಷೆಯು, ಈ ಕ್ಷಿಪಣಿಗಳನ್ನು ಇರಾನ್ ಹೌದಿ ಬಂಡುಕೋರರಿಗೆ ಪೂರೈಸಿದೆ ಎನ್ನುವುದನ್ನು ತೋರಿಸಿದೆ ಎಂದು ಅವರು ಆರೋಪಿಸಿದರು.
‘‘ಸೌದಿ ಅರೇಬಿಯದ ಮೇಲೆ ನಡೆಸಲಾಗುತ್ತಿರುವ ಈ ಪ್ರಕ್ಷೇಪಕ ಕ್ಷಿಪಣಿ ದಾಳಿಯು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ’’ ಎಂದು ಹೇಳಿದರು.