ಮನೆಗೆಲಸದಾಕೆಯ ಹತ್ಯೆ: ದಂಪತಿಗೆ ಮರಣದಂಡನೆ ವಿಧಿಸಿದ ಕುವೈತ್ ನ್ಯಾಯಾಲಯ

Update: 2018-04-01 16:47 GMT

ದುಬೈ, ಎ. 1: ಮನೆಗೆಲಸಕ್ಕಿದ್ದ ಫಿಲಿಪ್ಪೀನ್ಸ್ ಮಹಿಳೆಯನ್ನು ಕೊಂದ ಆರೋಪದಲ್ಲಿ ಲೆಬನಾನ್ ವ್ಯಕ್ತಿ ಮತ್ತು ಆತನ ಸಿರಿಯನ್ ಹೆಂಡತಿಗೆ ಅವರ ಅನುಪಸ್ಥಿತಿಯಲ್ಲಿ ಕುವೈತ್‌ನ ಕ್ರಿಮಿನಲ್ ನ್ಯಾಯಾಲಯವೊಂದು ರವಿವಾರ ಮರಣ ದಂಡನೆ ವಿಧಿಸಿದೆ.

 ಮನೆಗೆಲಸದ ಮಹಿಳೆಯ ಮೃತದೇಹ ಕುವೈತ್‌ನ ಪರಿತ್ಯಕ್ತ ಮನೆಯೊಂದರ ಫ್ರಿಜ್‌ನಲ್ಲಿ ಕಳೆದ ವರ್ಷ ಪತ್ತೆಯಾಗಿತ್ತು. ಈ ಮನೆ ಪ್ರಕರಣದ ಆರೋಪಿಗಳಿಗೆ ಸೇರಿತ್ತು. ಘಟನೆಯು ಕುವೈತ್ ಮತ್ತು ಫಿಲಿಪ್ಪೀನ್ಸ್ ನಡುವೆ ಬಿಕ್ಕಟ್ಟು ಸೃಷ್ಟಿಸಿತ್ತು. ಕುವೈತ್‌ನಲ್ಲಿರುವ ಫಿಲಿಪ್ಪೀನ್ಸ್ ಪ್ರಜೆಗಳು ವಾಪಸಾಗುವಂತೆ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಆದೇಶ ನೀಡಿರುವುದನ್ನು ಸ್ಮರಿಸಬಹುದಾಗಿದೆ.

ತಮ್ಮ ಮನೆಗೆಲಸದಾಕೆಯನ್ನು ದಂಪತಿಯು ಪೂರ್ವಯೋಜಿತ ರೀತಿಯಲ್ಲಿ ಕೊಂದಿರುವುದು ಕುವೈತ್‌ನ ನ್ಯಾಯಾಲಯವೊಂದರಲ್ಲಿ ಸಾಬೀತಾಗಿದೆ ಎಂದು ಕುವೈತ್ ಪತ್ರಿಕೆ ‘ಅಲ್ ರಾಯ್’ ವರದಿ ಮಾಡಿದೆ.

ಕೊಲೆ ನಡೆದ ಒಂದು ವರ್ಷದ ಬಳಿಕ ಅದು ಹೊರಜಗತ್ತಿನ ಗಮನಕ್ಕೆ ಬಂದಿದೆ. ಆರೋಪಿಗಳ ಅನುಪಸ್ಥಿತಿಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ ಎಂದು ಪತ್ರಿಕೆ ಹೇಳಿದೆ.

ಪ್ರಕರಣದ ಆರೋಪಿ ಪುರುಷ ಲೆಬನಾನ್‌ನಲ್ಲಿ ಪೊಲೀಸರ ವಶದಲ್ಲಿದ್ದಾನೆ. ಆತನನ್ನು ಕುವೈತ್‌ಗೆ ಗಡಿಪಾರು ಮಾಡುವಂತೆ ಕೋರುವ ಮನವಿಯನ್ನು ಲೆಬನಾನ್ ಪರಿಶೀಲಿಸುತ್ತಿದೆ. ಆರೋಪಿ ಮಹಿಳೆಯು ಸಿರಿಯದಲ್ಲಿ ಬಂಧನದಲ್ಲಿದ್ದಾಳೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News