ಕುವೈತ್: ವಿದೇಶಿಯರು ಮನೆಗೆ ಕಳುಹಿಸುವ ಹಣದ ಮೇಲೆ ತೆರಿಗೆ ಪ್ರಸ್ತಾಪ

Update: 2018-04-03 18:16 GMT

ಕುವೈತ್ ಸಿಟಿ, ಎ. 3: ವಿದೇಶಿ ಕೆಲಸಗಾರರು ತಮ್ಮ ಕುಟುಂಬಿಕರಿಗೆ ಕಳುಹಿಸುವ ಹಣದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪ ಹೊಂದಿರುವ ಕರಡು ಕಾನೂನೊಂದನ್ನು ಕುವೈತ್‌ನ ಸಂಸದೀಯ ಸಮಿತಿಯೊಂದು ಮಂಡಿಸಿದೆ.

ಈ ಕಾನೂನು ಜಾರಿಗೆ ಬಂದರೆ, ಕುವೈತ್‌ನಲ್ಲಿ ಕೆಲಸ ಮಾಡುವ ಲಕ್ಷಾಂತರ ಭಾರತೀಯರು ಸಂಕಷ್ಟಕ್ಕೀಡಾಗಲಿದ್ದಾರೆ.

ವಿದೇಶಿ ಕೆಲಸಗಾರರು ತಮ್ಮ ಊರಿಗೆ ಕಳುಹಿಸುವ ಹಣದ ಮೇಲೆ ತೆರಿಗೆ ವಿಧಿಸುವ ಮಸೂದೆಗೆ ಕುವೈತ್ ಸಂಸತ್ತಿನ ಹಣಕಾಸು ಮತ್ತು ಆರ್ಥಿಕ ವ್ಯವಹಾರಗಳ ಸಮಿತಿ ರವಿವಾರ ಅಂಗೀಕಾರ ನೀಡಿದೆ ಎಂದು ಸರಕಾರಿ ಒಡೆತನದ ಕುವೈತ್ ನ್ಯೂಸ್ ಏಜನ್ಸಿ ವರದಿ ಮಾಡಿದೆ.

ಕಳುಹಿಸುವ ಹಣದ ಮೇಲಿನ ತೆರಿಗೆಯು ಹಣವಿನಿಮಯಕಾರರು ಮತ್ತು ಬ್ಯಾಂಕ್‌ಗಳು ವಿಧಿಸುವ ಶುಲ್ಕಕ್ಕೆ ಹೆಚ್ಚುವರಿಯಾಗಿರುತ್ತವೆ.

ಪ್ರಸ್ತಾಪಿತ ಕಾನೂನಿನ ಪ್ರಕಾರ, 90 ದೀನಾರ್ (19,500 ರೂಪಾಯಿ)ವರಗೆ ವೇತನ ಹೊಂದಿರುವ ಉದ್ಯೋಗಿಗಳು ಕಳುಹಿಸುವ ಹಣದ ಮೇಲೆ 1 ಶೇಕಡ ಶುಲ್ಕ ವಿಧಿಸಲಾಗುತ್ತದೆ.

ಅದೇ ರೀತಿ, 100 ದೀನಾರ್ (21,600 ರೂಪಾಯಿ) ನಿಂದ 200 ದೀನಾರ್ (43,350 ರೂಪಾಯಿ)ವರೆಗೆ ಸಂಬಳ ಹೊಂದಿರುವ ವಿದೇಶೀಯರು ಕಳುಹಿಸುವ ಹಣಕ್ಕೆ 2 ಶೇಕಡ ಹಾಗೂ 300 ದೀನಾರ್ (65,000 ರೂಪಾಯಿ)ನಿಂದ 499 ದೀನಾರ್ (1.08 ಲಕ್ಷ ರೂಪಾಯಿ)ವರೆಗೆ ಸಂಬಳ ಹೊಂದಿರುವ ವಿದೇಶಿ ಉದ್ಯೋಗಿಗಳು ಕಳುಹಿಸುವ ಹಣದ ಮೇಲೆ 3 ಶೇಕಡ ತೆರಿಗೆ ವಿಧಿಸಲಾಗುವುದು.

500 ದೀನಾರ್ (ಸುಮಾರು 1.08 ಲಕ್ಷ ರೂಪಾಯಿ)ನಿಂದ 1,664 ದೀನಾರ್ (ಸುಮಾರು 3.06 ಲಕ್ಷ ರೂಪಾಯಿ)ವರೆಗೆ ವೇತನ ಹೊಂದಿರುವ ವಿದೇಶೀಯರು ಕಳುಹಿಸುವ ಹಣದ ಮೇಲೆ 5 ಶೇಕಡ ತೆರಿಗೆ ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News