ಯಮನ್: ನಾಗರಿಕರ ಮನೆಗಳ ಮೇಲೆ ಹೌದಿ ಬಂಡುಕೋರರಿಂದ ಕ್ಷಿಪಣಿ ದಾಳಿ

Update: 2018-04-21 18:11 GMT

ದುಬೈ, ಎ. 21: ಇರಾನ್ ಬೆಂಬಲಿತ ಹೌದಿ ಬಂಡುಕೋರರು ಯಮನ್‌ನ ಟೈಝ್ ಪ್ರಾಂತದಲ್ಲಿ ನಾಗರಿಕರ ವಿರುದ್ಧ ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆಯ ಮೌನವನ್ನು ಯಮನ್ ಸರಕಾರ ಖಂಡಿಸಿದೆ.

ಈ ಪ್ರಾಂತದ ನಿವಾಸಿಗಳ ಮನೆಗಳ ಮೇಲೆ ಬಂಡುಕೋರರು ವಿವೇಚನಾರಹಿತವಾಗಿ ಕ್ಷಿಪಣಿಗಳನ್ನು ಹಾರಿಸುತ್ತಿದ್ದಾರೆ ಎಂದು ಯಮನ್‌ನ ಸ್ಥಳೀಯಾಡಳಿತ ಸಚಿವ ಅಬ್ದುಲ್ ರಾಕಿಬ್ ಫತಾ ಹೇಳಿದ್ದಾರೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಟೈಝ್ ಪ್ರಾಂತದ ಹಲವಾರು ಜಿಲ್ಲೆಗಳಲ್ಲಿ ಮನೆಗಳ ಮೇಲೆ ಬಂಡುಕೋರರು ನಿರಂತರವಾಗಿ ಕ್ಷಿಪಣಿಗಳನ್ನು ಹಾರಿಸುತ್ತಿದ್ದು, ಇದು ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವೀಯ ಕಾನೂನುಗಳ ಪ್ರಕಾರ ಅಪರಾಧವಾಗಿದೆ ಎಂದರು.

ಹೌದಿ ಬಂಡುಕೋರರ ಎಲ್ಲ ಅಪರಾಧಗಳ ವಿರುದ್ಧ ಗಂಭೀರ ಹಾಗೂ ದೃಢ ನಿಲುವುಗಳನ್ನು ತೆಗೆದುಕೊಳ್ಳುವಂತೆ ಅವರು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದರು.

ಈ ಉಲ್ಲಂಘನೆಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಮೌನವನ್ನು ಸಹಿಸಲಾಗದು ಎಂದು ಸಚಿವರು ಹೇಳಿದರು. ಈ ಅಪರಾಧಗಳನ್ನು ನಿಲ್ಲಿಸಲು ತಕ್ಷಣ ಮಧ್ಯಪ್ರವೇಶಿಸುವಂತೆ ಅವರು ಯಮನ್‌ನಲ್ಲಿರುವ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯಕಾರಿಣಿ ಲೈಸ್ ಗ್ರಾಂಡ್ ಮತ್ತು ಮಾನವಹಕ್ಕುಗಳ ಸಂಘಟನೆಗಳನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News