ಇರಾನ್ ನಿಯಂತ್ರಿಸಲು ಹಾಲಿ ಪರಮಾಣು ಒಪ್ಪಂದ ಸಾಲಲ್ಲ

Update: 2018-04-29 16:11 GMT

ರಿಯಾದ್ (ಸೌದಿ ಅರೇಬಿಯ), ಎ. 29: ಇರಾನ್‌ನ ಚಟುವಟಿಕೆಗಳನ್ನು ನಿಯಂತ್ರಿಸಲು ಅದರ ಜೊತೆಗೆ ಈಗ ಹೊಂದಿರುವ ಪರಮಾಣು ಒಪ್ಪಂದ ಸಾಕಾಗುವುದಿಲ್ಲ ಎಂದು ಅಮೆರಿಕದ ನೂತನ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.

  ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಮಧ್ಯಪ್ರಾಚ್ಯಕ್ಕೆ ಭೇಟಿ ನೀಡಿರುವ ಅವರು, ರವಿವಾರ ಸೌದಿ ಅರೇಬಿಯ ರಾಜಧಾನಿ ರಿಯಾದ್‌ನಲ್ಲಿ ಆತಿಥೇಯ ದೇಶದ ವಿದೇಶ ಸಚಿವ ಆದಿಲ್ ಅಲ್- ಜುಬೈರ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

‘‘ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದಂದಿನಿಂದ ಇರಾನ್ ಕೆಟ್ಟದಾಗಿ ನಡೆದುಕೊಳ್ಳುತ್ತಿದೆ’’ ಎಂದು ಪಾಂಪಿಯೊ ಆರೋಪಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸೌದಿ ವಿದೇಶ ಸಚಿವ ಜುಬೈರ್, ಕ್ಷಿಪಣಿಗಳ ಪೂರೈಕೆ ಮತ್ತು ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲಕ್ಕಾಗಿ ಇರಾನ್ ವಿರುದ್ಧ ಹೆಚ್ಚಿನ ದಿಗ್ಬಂಧನಗಳನ್ನು ವಿಧಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಯಮನ್‌ನಲ್ಲಿ ರಾಜಕೀಯ ಪರಿಹಾರವೊಂದನ್ನು ಕಂಡುಹಿಡಿಯಬೇಕಾದ ಅಗತ್ಯವನ್ನೂ ಇಬ್ಬರು ನಾಯಕರು ಪ್ರತಿಪಾದಿಸಿದರು.

ಇದಕ್ಕೂ ಮೊದಲು ಪಾಂಪಿಯೊ ಸೌದಿ ದೊರೆ ಸಲ್ಮಾನ್‌ರನ್ನು ಭೇಟಿಯಾದರು.

ಕತರ್ ಜೊತೆಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ: ಕೊಲ್ಲಿ ದೇಶಗಳಿಗೆ ಕರೆ

ಕತರ್‌ನೊಂದಿಗೆ ಹೊಂದಿರುವ ದೀರ್ಘಕಾಲೀನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವಂತೆ ಮೈಕ್ ಪಾಂಪಿಯೊ ಈ ಸಂದರ್ಭದಲ್ಲಿ ಸೌದಿ ಅರೇಬಿಯ ಹಾಗೂ ಇತರ ಕೊಲ್ಲಿ ದೇಶಗಳಿಗೆ ಕರೆ ನೀಡಿದರು.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳು ಕಳೆದ ವರ್ಷದ ಜೂನ್‌ನಲ್ಲಿ ಅದರ ವಿರುದ್ಧ ರಾಜತಾಂತ್ರಿಕ ಹಾಗೂ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News