ಕತರ್: ಎಕ್ಸಿಟ್ ಪರ್ಮಿಟ್ ಸಿಸ್ಟಮ್ ರದ್ದತಿಗೆ ಕ್ಷಣಗಣನೆ

Update: 2018-04-30 17:10 GMT

ದೋಹಾ (ಕತರ್), ಎ. 30: ಕತರ್‌ನಲ್ಲಿ ಕೆಲಸ ಮಾಡುವುದು ಮತ್ತು ಜೀವಿಸುವುದನ್ನು ಶ್ರೇಷ್ಠ ಅನುಭವವಾಗಿಸುವ ನಿಟ್ಟಿನಲ್ಲಿ ಸರಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಈ ಪೈಕಿ ಅತ್ಯಂತ ಮಹತ್ವದ್ದು ‘ಎಕ್ಸಿಟ್ ಪರ್ಮಿಟ್ ಸಿಸ್ಟಮ್’ನ್ನು ರದ್ದುಪಡಿಸುವುದು. ಇನ್ನು ಎರಡು ವಾರಗಳಲ್ಲಿ ಇದು ಸಂಭವಿಸಲಿದೆ ಎಂದು ಪರಿಣತರು ಹೇಳುತ್ತಾರೆ.

‘ಎಕ್ಸಿಟ್ ಪರ್ಮಿಟ್ ಸಿಸ್ಟಮ್’ ಪ್ರಕಾರ, ಕತರ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ದೇಶದಿಂದ ಹೊರಗೆ ಹೋಗಬೇಕಾದರೆ ಉದ್ಯೋಗದಾತರ ಅನುಮತಿಯನ್ನು ಪಡೆಯಬೇಕಾಗುತ್ತದೆ.

ಎಕ್ಸಿಟ್ ಪರ್ಮಿಟ್ ಸಿಸ್ಟಮ್ ರದ್ದುಪಡಿಸುವ ಪ್ರಸ್ತಾಪಕ್ಕೆ ಕತರ್ ಎರಡು ವಾರಗಳಲ್ಲಿ ಒಪ್ಪಿಗೆ ನೀಡಬಹುದಾಗಿದೆ ಎಂದು ಕಾರ್ಮಿಕ ಕಾನೂನುಗಳ ಪರಿಣತರು ಹೇಳುತ್ತಾರೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಇತ್ತೀಚೆಗೆ ದೋಹಾದಲ್ಲಿ ಕಚೇರಿ ಆರಂಭಿಸಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಸುಧಾರಣೆ ಜಾರಿಗೆ ಬರುವ ಸಾಧ್ಯತೆ ಹೆಚ್ಚಾಗಿದೆ.

2022ರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಆತಿಥೇಯ ದೇಶವಾಗಿರುವ ಕತರ್‌ನಲ್ಲಿ ಜಾರಿಗೆ ಬರಲಿರುವ ಕಾರ್ಮಿಕ ಸುಧಾರಣೆಗಳ ಉಸ್ತುವಾರಿ ನೋಡಿಕೊಳ್ಳುವುದಕ್ಕಾಗಿ ಐಎಲ್‌ಒ ದೋಹಾದಲ್ಲಿ ಕಚೇರಿ ಆರಂಭಿಸಿದೆ.

‘‘ಎಕ್ಸಿಟ್ ವೀಸಾದ ಕೊನೆಯ ವಿವರಗಳನ್ನು ನಾವೀಗ ಪರಿಶೀಲಿಸುತ್ತಿದ್ದೇವೆ. ಮುಂದಿನ ಎರಡು ವಾರಗಳಲ್ಲಿ ಈ ಸಂಬಂಧ ಕರಾರೊಂದು ಏರ್ಪಡುವುದನ್ನು ನಾವು ಎದುರುನೋಡುತ್ತಿದ್ದೇವೆ’’ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ಯಾರನ್ ಬರೋ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News