ಇರಾನ್: ಉಗ್ರ ದಾಳಿ ನಡೆಸಿದ 8 ಮಂದಿಗೆ ಗಲ್ಲು

Update: 2018-05-13 17:35 GMT

ದುಬೈ, ಮೇ 13: ಇರಾನ್ ಸಂಸತ್ತು ಮತ್ತು ದೇಶದ ಆಯತುಲ್ಲಾ ರಹುಲ್ಲಾ ಖೊಮೈನಿಯ ಸ್ಮಾರಕದ ಮೇಲೆ ಕಳೆದ ವರ್ಷ ಐಸಿಸ್ ಭಯೋತ್ಪಾದಕ ಗುಂಪು ನಡೆಸಿದ ದಾಳಿಗೆ ಸಂಬಂಧಿಸಿ ಆ ದೇಶದ ನ್ಯಾಯಾಲಯವೊಂದು ರವಿವಾರ 8 ಮಂದಿಗೆ ಮರಣ ದಂಡನೆ ವಿಧಿಸಿದೆ. ಐಸಿಸ್ ಇರಾನ್‌ನಲ್ಲಿ ನಡೆಸಿದ ಪ್ರಥಮ ಮಾರಕ ದಾಳಿ ಇದಾಗಿದ್ದು, ಅದರಲ್ಲಿ 18 ಮಂದಿ ಮೃತಪಟ್ಟಿದ್ದಾರೆ.

ರೆವಲೂಶನರಿ ನ್ಯಾಯಾಲಯ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ ಎಂದು ಟೆಹರಾನ್ ರೆವಲೂಶನರಿ ನ್ಯಾಯಾಲಯದ ಮುಖ್ಯಸ್ಥ ಮೂಸಾ ಗಝನ್‌ಫರಬದಿ ಸರಕಾರಿ ಟೆಲಿವಿಶನ್‌ಗೆ ತಿಳಿಸಿದರು. ದಾಳಿಯ ಸಂತ್ರಸ್ತರು ಅಮೆರಿಕ ಮತ್ತು ಸೌದಿ ಅರೇಬಿಯಗಳ ವಿರುದ್ಧ ಸಲ್ಲಿಸಿರುವ ಮೊಕದ್ದಮೆಗಳ ವಿಚಾರಣೆಯನ್ನು ನಂತರ ನಡೆಸಲಾಗುವುದು ಎಂದು ಅವರು ಹೇಳಿದರು.

ಐಸಿಸ್‌ಗೆ ಸೌದಿ ಅರೇಬಿಯ ಮತ್ತು ಅಮೆರಿಕ ಬೆಂಬಲ ನೀಡುತ್ತಿವೆ ಎಂಬುದಾಗಿ ಶಿಯಾ ಮುಸ್ಲಿಮ್ ಪ್ರಾಬಲ್ಯದ ಇರಾನ್ ಆರೋಪಿಸುತ್ತಿದೆ. ಆದರೆ, ಎರಡೂ ದೇಶಗಳು ಈ ಆರೋಪವನ್ನು ನಿರಾಕರಿಸಿವೆ. ಇರಾನ್‌ನಲ್ಲಿ ನಡೆದ ದಾಳಿಗಳ ಹೊಣೆಯನ್ನು ಐಸಿಸ್ ಹೊತ್ತಿರುವುದನ್ನು ಸ್ಮರಿಸಬಹುದಾಗಿದೆ. ಇನ್ನೂ 18 ಶಂಕಿತರು ದಾಳಿಗಳಿಗೆ ಸಂಬಂಧಿಸಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಭದ್ರತಾ ಪಡೆಗಳ ಪ್ರತಿ ದಾಳಿಯಲ್ಲಿ ಸತ್ತ ಐವರು ಬಂದೂಕುಧಾರಿಗಳು ಮತ್ತು ಆತ್ಮಹತ್ಯಾ ಬಾಂಬರ್‌ಗಳು ಸಿರಿಯ ಮತ್ತು ಇರಾಕ್‌ಗಳಲ್ಲಿ ಯುದ್ಧ ಮಾಡಿದ್ದರು ಎಂದು ಇರಾನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News