ಅರಬ್ ವಲಯ ಅಸ್ಥಿರ ಚಟುವಟಿಕೆ ನಿಲ್ಲಿಸಿ: ಇರಾನ್‌ಗೆ ಕೊಲ್ಲಿ ಸಹಕಾರ ಮಂಡಳಿ ಒತ್ತಡ

Update: 2018-05-14 17:57 GMT

ರಿಯಾದ್, ಮೇ 14: ವಿಶ್ವಸಂಸ್ಥೆಯ ಸನ್ನದುಗಳನ್ನು ಗೌರವಿಸುವಂತೆ, ಸೌದಿ ಅರೇಬಿಯದ ಮೇಲೆ ದಾಳಿ ನಡೆಸುವುದಕ್ಕಾಗಿ ಯಮನ್‌ನಲ್ಲಿರುವ ಹೌದಿ ಬಂಡುಕೋರರಿಗೆ ಪ್ರಕ್ಷೇಪಕ ಕ್ಷಿಪಣಿಗಳನ್ನು ಪೂರೈಸುವುದನ್ನು ನಿಲ್ಲಿಸುವಂತೆ ಹಾಗೂ ಅರಬ್ ದೇಶಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವುದನ್ನು ನಿಲ್ಲಿಸುವಂತೆ ಇರಾನ್ ಮೇಲೆ ಒತ್ತಡ ಹೇರುವಂತೆ ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ) ರವಿವಾರ ಅಂತರ್ ರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ.

‘‘ಪರಮಾಣು ಅಸ್ತ್ರಗಳು ಸೇರಿದಂತೆ ಸರ್ವ ಸಮೂಹನಾಶಕ ಅಸ್ತ್ರಗಳಿಂದ ಮುಕ್ತವಾದ ಮಧ್ಯಪ್ರಾಚ್ಯವನ್ನು ಜಿಸಿಸಿ ದೇಶಗಳು ಬಯಸುತ್ತವೆ’’ ಎಂದು ಅದರ ಮಹಾಕಾರ್ಯದರ್ಶಿ ಅಬ್ದುಲ್ಲತೀಫ್ ಅಲ್-ಝಯಾನಿ ಹೇಳಿದರು. ಇರಾನ್‌ನ ಆರ್ಥಿಕತೆಯು ಹಿನ್ನಡೆಯಲ್ಲಿದ್ದರೂ, ಈ ವಲಯವನ್ನು ಅಸ್ಥಿರಗೊಳಿಸಲು ಇರಾನ್ ತನ್ನ ಸಂಪನ್ಮೂಲಗಳನ್ನು ಬಳಸುತ್ತಿದೆ ಎಂದು ಅವರು ಆರೋಪಿಸಿದರು.

‘‘ಪ್ರಾದೇಶಿಕ ಭದ್ರತೆಯನ್ನು ಇರಾನ್ ಬಯಸುತ್ತಿದ್ದರೆ, ಅದು ಕೆಲವೊಂದು ಅಗತ್ಯಗಳನ್ನು ಪೂರೈಸಬೇಕಾಗುತ್ತದೆ. ಪರಮಾಣು ತಪಾಸಣೆಯನ್ನು ಪೂರ್ಣಗೊಳಿಸುವುದು, ಭಯೋತ್ಪಾದಕರಿಗೆ ಪ್ರಕ್ಷೇಪಕ ಕ್ಷಿಪಣಿಗಳನ್ನು ನೀಡುವುದನ್ನು ನಿಲ್ಲಿಸುವುದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಗೌರವಿಸುವುದು ಹಾಗೂ ನೆರೆ ದೇಶಗಳಲ್ಲಿ ಹಸ್ತಕ್ಷೇಪ ಮಾಡದೇ ಇರುವುದು ಈ ಅಗತ್ಯಗಳಲ್ಲಿ ಸೇರಿದೆ’’ ಎಂದರು.

ಯಮನ್ ಬಿಕ್ಕಟ್ಟನ್ನು ನಿವಾರಿಸಲು ಕೊಲ್ಲಿ ರಾಷ್ಟ್ರಗಳು ತೆಗೆದುಕೊಂಡ ಮುತುವರ್ಜಿಗೆ ಅರಬ್, ಪ್ರಾದೇಶಿಕ ಮತ್ತು ಜಾಗತಿಕ ದೇಶಗಳು ಬೆಂಬಲ ನೀಡಿವೆ ಎಂದು ಅವರು ಹೇಳಿದರು.

ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್) ಯಮನ್ ಜನರಿಗೆ ನೀಡಿರುವ ನೆರವನ್ನು ಅಲ್-ಝಯಾನಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News