ಮುಸ್ಲಿಮ್ ಕಾರ್ಮಿಕರಿಗಾಗಿ ಮಸೀದಿ ನಿರ್ಮಿಸಿ ಕೊಟ್ಟ ಕ್ರೈಸ್ತ ಉದ್ಯಮಿ

Update: 2018-05-17 09:16 GMT
ಸಾಂದರ್ಭಿಕ ಚಿತ್ರ

ದುಬೈ,ಮೇ.17 : ಭಾರತದ ಶ್ರೀಮಂತ ಕ್ರೈಸ್ತ ಉದ್ಯಮಿಯೊಬ್ಬರು ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ನೂರಾರು ಮುಸ್ಲಿಂ ಕಾರ್ಮಿಕರಿಗಾಗಿ  ರಮಝಾನ್ ಗೆ ಮುನ್ನ 3 ಲಕ್ಷ ಡಾಲರ್ ಮೌಲ್ಯದ ಮಸೀದಿಯೊಂದನ್ನು ಉಡುಗೊರೆ ನೀಡಿದ್ದಾರೆ.

ಕೇರಳದ  ಕಾಯಂಕುಲಂ ಮೂಲದವರಾದ 49 ವರ್ಷದ ಸಜಿ ಚೆರಿಯನ್ ಎಂಬ ಉದ್ಯಮಿಯೇ ಫುಜೈರಾಹ್ ದ 53 ಕಂಪೆನಿಗಳಿಗೆ ಕಾರ್ಮಿಕರ ವಸತಿ ಸೌಕರ್ಯಕ್ಕೆಂದು ತಾವು ಬಾಡಿಗೆಗೆಂದು ನೀಡಿದ ಕಟ್ಟಡದಲ್ಲಿ ಈ ಮಸೀದಿ ನಿರ್ಮಿಸಿದ್ದು ಅದಕ್ಕೆ ಮರಿಯಂ,ಉಮ್ಮ್ ಈಸಾ ಎಂದು ಹೆಸರಿಟ್ಟಿದ್ದಾರೆ.

ಹತ್ತಿರದ ಮಸೀದಿಗೆಳಿಗೆ ತೆರಳಲು ಕಾರ್ಮಿಕರು ಟ್ಯಾಕ್ಸಿಗಳಲ್ಲಿ ತೆರಳಿ ಕನಿಷ್ಠ 20 ಧಿರಂ ವೆಚ್ಚ ಮಾಡಬೇಕಾಗಿರುವುದನ್ನು ಕಂಡು ಅವರ ವಸತಿ ಸ್ಥಳದ ಹತ್ತಿರದಲ್ಲಿಯೇ ಮಸೀದಿ ನಿರ್ಮಿಸಿದರೆ ಅವರಿಗೆ ಸಂತಸವಾಗುವುದೆಂದು ಹೀಗೆ ಮಾಡಿದ್ದಾಗಿ ಚೆರಿಯನ್ ಹೇಳಿದ್ದಾರೆ.

ಸಂಯುಕ್ತ ಅರಬ್ ಸಂಸ್ಥಾನಕ್ಕೆ 2003ರಲ್ಲಿ ಕೈಯ್ಯಲ್ಲಿ ಕೇವಲ ನೂರು ಧಿರಂ ಇಟ್ಟುಕೊಂಡು ಬಂದಿದ್ದ ಈ ಉದ್ಯಮಿ ನಿರ್ಮಿಸಲಿರುವ ಮಸೀದಿಯಲ್ಲಿ ಒಮ್ಮೆಗೆ 250 ಜನರು ಪ್ರಾರ್ಥಿಸಬಹುದಾಗಿದ್ದು ಅದು ಅಲ್ ಹಯ್ಲ್ ಕೈಗಾರಿಕಾ ಪ್ರದೇಶದಲ್ಲಿರುವ  ಈಸ್ಟ್ ವಿಲ್ಲೆ ರಿಯಲ್ ಎಸ್ಟೇಟ್ ಕಾಂಪ್ಲೆಕ್ಸ್ ನಲ್ಲಿದೆ. ಇನ್ನೂ 700 ಮಂದಿಗೆ ಪ್ರಾರ್ಥನೆ ಸಲ್ಲಿಸಲು ಮಸೀದಿಯ ಇಂಟರ್ ಲಾಕ್ ಹಾಕಲ್ಪಟ್ಟ ಹೊರಾಂಗಣದಲ್ಲಿ ವ್ಯವಸ್ಥೆ ಮಾಡಲಾಗುವುದು. ಮಸೀದಿ ನಿರ್ಮಾಣ ಕಾರ್ಯ ಒಂದು ವರ್ಷದ ಹಿಂದೆ ಆರಂಭವಾಗಿದ್ದು ಫುಜೈರಾಹ್ ದ ಅವ್ಖಫ್ ಬೆಂಬಲದೊಂದಿಗೆ ನಿರ್ಮಿಸಲಾಗಿದೆ. ಆದರೆ ಚೆರಿಯನ್ ಅವರು ಈ ಸಂಸ್ಥೆಯಿಂದ ಕೇವಲ ನೆಲ ಹಾಸು ಮತ್ತು ಸೌಂಡ್ ಸಿಸ್ಟಂ ವ್ಯವಸ್ಥೆ ಮಾತ್ರ ಪಡೆಯಲು ನಿರ್ಧರಿಸಿದ್ದಾರೆ.

ಅಬುದಾಭಿಯ ಮಸೀದಿಯೊಂದಕ್ಕೆ 2017ರಲ್ಲಿ ಮರಿಯಂ ಉಮ್ಮ್ ಈಸಾ (ಮೇರಿ, ಕ್ರಿಸ್ತನ ತಾಯಿ) ಎಂದು ಹೆಸರಿಟ್ಟದ್ದನ್ನು ನೋಡಿ ಈ ಮಸೀದಿಗೂ ಅದೇ ಹೆಸರಿಟ್ಟಿದ್ದಾಗಿ ಚೆರಿಯನ್ ಹೇಳಿದ್ದಾರೆ. ಈ ಹಿಂದೆ ಅವರು ದಿಬ್ಬ ಎಂಬಲ್ಲಿ ಚರ್ಚ್ ಒಂದನ್ನು ನಿರ್ಮಿಸಿದ್ದಾರಲ್ಲದೆ ಕ್ರೈಸ್ತರ ವಿವಿಧ ಪಂಗಡಗಳಿಗೆ ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News