ಸೌದಿ: ಮಹಿಳಾ ವಾಹನ ಚಾಲನೆ ನಿಷೇಧ ಪ್ರಶ್ನಿಸಿದವರ ಬಂಧನ

Update: 2018-05-19 16:28 GMT

ರಿಯಾದ್ (ಸೌದಿ ಅರೇಬಿಯ), ಮೇ 19: ಸೌದಿ ಅರೇಬಿಯದ ಪೊಲೀಸರು ಕನಿಷ್ಠ ಐವರು ಖ್ಯಾತ ಮಾನವಹಕ್ಕುಗಳ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಸೌದಿ ಮಹಿಳೆಯರಿಗೆ ವಾಹನ ಚಾಲನೆ ಹಕ್ಕನ್ನು ಪಡೆಯುವುದಕ್ಕಾಗಿ ಹಲವು ವರ್ಷಗಳ ಕಾಲ ಹೋರಾಟ ನಡೆಸಿರುವ ಮಹಿಳೆಯರೂ ಬಂಧಿತರಲ್ಲಿ ಸೇರಿದ್ದಾರೆ.

ದೇಶದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಕೆಲವು ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತಂದಿರುವಂತೆಯೇ, ರಾಜಕೀಯ ಚಳವಳಿಗಳನ್ನು ಹತ್ತಿಕ್ಕುವ ಭಾಗವಾಗಿ ಯುವರಾಜರ ಸೂಚನೆಯ ಮೇರೆಗೆ ಈ ಬಂಧನ ಕಾರ್ಯಾಚರಣೆ ನಡೆಸಲಾಗಿದೆ ಎಂಬುದಾಗಿ ಭಾವಿಸಲಾಗಿದೆ. ಸೌದಿ ಭಿನ್ನಮತೀಯರ ಸಾಮಾಜಿಕ ಜಾಲ ತಾಣಗಳ ಮೂಲಕ ಈ ಬಂಧನಗಳು ಬಹಿರಂಗಗೊಂಡಿವೆ. ಸರಕಾರದ ವಕ್ತಾರರೊಬ್ಬರು ಬಂಧನಗಳ ಬಗ್ಗೆ ತಕ್ಷಣಕ್ಕೆ ವಿವರಗಳನ್ನು ನೀಡಲಿಲ್ಲ.

ಸೌದಿ ಅರೇಬಿಯದಲ್ಲಿ ವಾಹನ ಚಾಲನೆ ಮಾಡಲು ಮಹಿಳೆಯರಿಗೆ ಪರವಾನಿಗೆ ನೀಡುವ 5 ವಾರಗಳಿಗೆ ಮುಂಚಿತವಾಗಿ ಬಂಧನಗಳನ್ನು ನಡೆಸಲಾಗಿದೆ. ವಾಹನ ಚಾಲನೆ ಹಕ್ಕಿಗಾಗಿ ಹಲವು ಮಹಿಳಾ ಕಾರ್ಯಕರ್ತರು ದಶಕಗಳ ಕಾಲ ಹೋರಾಟ ಮಾಡಿದ್ದಾರೆ. ಅವರ ಪೈಕಿ ಕೆಲವರು ಜೈಲು ಶಿಕ್ಷೆಗೂ ಗುರಿಯಾಗಿದ್ದಾರೆ.

ಬಂಧನಗಳ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಮಹಿಳಾ ವಾಹನ ಚಾಲನೆ ನಿಷೇಧ ತೆರವಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂಬುದಾಗಿ ತಮಗೆ ತಾಕೀತು ಮಾಡಲಾಗಿದೆ ಎಂದು ಹಲವು ಮಹಿಳಾ ಕಾರ್ಯಕರ್ತರು ಹೇಳಿದ್ದಾರೆ.

ಹೋರಾಟಗಳಿಂದ ಸಾಮಾಜಿಕ ಬದಲಾವಣೆ ತರಬಹುದು ಎಂಬ ಕಲ್ಪನೆಯನ್ನು ನಿರುತ್ತೇಜಿಸುವ ಸಲುವಾಗಿ ಬಂಧನಗಳನ್ನು ನಡೆಸಿರುವ ಸಾಧ್ಯತೆಯಿದೆ ಎಂದು ಕೆಲವು ಮಹಿಳಾ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News